ಬಂಟಕಲ್ಲು: ಉಚಿತ ನೇತ್ರ ತಪಾಸಣೆ, ಆರೋಗ್ಯ ತಪಾಸಣೆ-ಚಿಕಿತ್ಸಾ ಶಿಬಿರ ಉದ್ಘಾಟನೆ

ಶಿರ್ವ: ಶತಮಾನೋತ್ಸವದ ಸಂಭ್ರಮದಲ್ಲಿರುವ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಆಚರಣಾ ಸಮಿತಿಯ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣೆ,ಆರೋಗ್ಯ ತಪಾಸಣೆ-ಚಿಕಿತ್ಸಾ ಶಿಬಿರವನ್ನು ಶಾಲಾ ಆವರಣದಲ್ಲಿ ರವಿವಾರ ಏರ್ಪಡಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಹಾಗೂ ನೇತ್ರತಜ್ಞ ಡಾ.ನಿತ್ಯಾನಂದ ನಾಯಕ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಏರ್ಪಡಿಸುವ ಇಂತಹ ಶಿಬಿರಗಳಿಂದ ಜನಸಾಮಾನ್ಯರಿಗೆ ಆರೋಗ್ಯ ಮಾತಿಯ ಜೊತೆಗೆ ರೋಗದ ಲಕ್ಷಣಗಳನ್ನು ಗುರುತಿಸಿ ಉಚಿತ ಚಿಕಿತ್ಸೆ, ಸಲಹೆಗಳನ್ನು ನೀಡಲು ಅನುಕೂಲವಾಗುತ್ತದೆ. ಸಾರ್ವಜನಿಕರು ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಶ ಉಪಾಧ್ಯಾಯ ಆಯುರ್ವೇದ ಚಿಕಿತ್ಸೆ ಹಾಗೂ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ದಿನೇಶ ದೇವಾಡಿಗ ವಹಿಸಿದ್ದರು.
ವೇದಿಕೆಯಲ್ಲಿ ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರದ ಟ್ರಸ್ಟಿ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಬಿ.ಪದ್ಮನಾಭ ಭಟ್, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್, ಬಂಟಕಲ್ಲು ಲಯನ್ಸ್ ಕ್ಲಬ್ ಜಾಸ್ಮಿನ್ ಅಧ್ಯಕ್ಷೆ ಮೇಬಲ್ ಮಿನೇಜಸ್, ಲಯನ್ಸ್ ಬಂಟಕಲ್ಲು ಬಿ.ಸಿ.ರೋಡ್ ಅಧ್ಯಕ್ಷ ಟೋನಿ ಮೋನಿಸ್, ಶಾಲಾ ಮುಖ್ಯಶಿಕ್ಷಕಿ ಸಂಗೀತಾ ಆರ್.ಪಾಟ್ಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಹಳೆದ್ಯಾರ್ಥಿ ವೈದ್ಯರುಗಳಾದ ಡಾ.ಗೀತಾ ಶರ್ಮಾ ಕಟೀಲು, ಡಾ.ಸುಷ್ಮಾ ಕಿರಣ್ ಬಂಟಕಲ್ಲು ಅವರನ್ನು ಸನ್ಮಾನಿಸಲಾಯಿತು. ಕೆ.ಆರ್.ಪಾಟ್ಕರ್ ಸ್ವಾಗತಿಸಿದರು. ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು. ೨೦೦ಕ್ಕೂ ಅಧಿಕ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಸೊಸೈಟಿ, ಅಂಧತ್ವ ನಿವಾರಣಾ ಭಾಗ ಉಡುಪಿ, ಸಂಚಾರಿ ನೇತ್ರ ಘಟಕ ಜಿಲ್ಲಾಸ್ಪತ್ರೆ ಉಡುಪಿ, ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ,ಬಂಟಕಲ್ಲು ನಾಗರಿಕ ಸೇವಾ ಸುತಿ, ರಾಜಾಪುರ ಸಾರಸ್ವತ ಸೇವಾ ವೃಂದ, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಮತ್ತು ಬಂಟಕಲ್ಲು ಬಿ.ಸಿ.ರೋಡ್ ಸಹಭಾಗಿತ್ವ ನೀಡಿದ್ದರು.







