ಬಿದ್ಕಲ್‌ಕಟ್ಟೆಯಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ

ಉಡುಪಿ, ಡಿ.17: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್, ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಏಳು ಶಾಲೆಗಳ ಪ್ರೌಢ ಶಾಲಾ ವಿದ್ಯಾರ್ಥಿಗಳ ಕಿಶೋರ ಯಕ್ಷಗಾನ ಸಂಭ್ರಮದ ಪ್ರದರ್ಶನಗಳನ್ನು ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಆಯೋಜಿಸಿದ್ದು ಇದರ ಉದ್ಘಾಟನೆ ಮಂಗಳವಾರ ಸಂಜೆ ಜರಗಿತು.
ಪ್ರದರ್ಶನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಸ್ಥಳೀಯ ಉದ್ಯಮಿ ಎಚ್.ಶಂಕರ ಹೆಗ್ಡೆ ಜನ್ನಾಡಿ ಮಾತನಾಡಿ, ಯಕ್ಷಗಾನ ನಮ್ಮ ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ತಲಪಿಸಿ, ಉತ್ತಮ ಜೀವನ ಮೌಲ್ಯಗಳನ್ನು ಕಲಿಸುವ ಅತ್ಯುತ್ತಮ ಕಲಾಪ್ರಕಾರ. ‘ಯಕ್ಷಶಿಕ್ಷಣ ಟ್ರಸ್ಟ್’ ಶಾಲೆಗಳಲ್ಲಿ ಯಕ್ಷ ಶಿಕ್ಷಣ ಮಹಾಭಿ ಯಾನದ ಮೂಲಕ ಮೇಲಿನ ಉದ್ದೇಶವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದರು.
ಪ್ರಾಯೋಜಕರಾದ ಪ್ರಶಾಂತ್ ಮತ್ತು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಕೋಶಾಧಿಕಾರಿ ಗಣೇಶ ಬ್ರಹ್ಮಾವರ, ಕಲಾರಂಗದ ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.
ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳನ್ನಾಡಿದರು. ಜಯಪ್ರಕಾಶ್ ಅತಿಥಿಗಲನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮೊದಲ ದಿನ ಅಮಾಸೆಬೈಲಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ‘ಸುದರ್ಶನ ವಿಜಯ’ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿಯ ವಿದ್ಯಾರ್ಥಿಗಳು ‘ಮೀನಾಕ್ಷಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನೀಡಿದರು.







