ಕೊರಗರ ಅಹೋರಾತ್ರಿ ಧರಣಿ ಏಳನೆ ದಿನಕ್ಕೆ: ಶಾಸಕರ ಭೇಟಿ

ಉಡುಪಿ, ಡಿ.20: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಕಲ್ಪಿಸು ವಂತೆ ಆಗ್ರಹಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅನಿಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರನೇ ದಿನವಾದ ಶನಿವಾರವೂ ಮುಂದುವರೆದಿದೆ.
ಇಂದು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ಮನವಿ ಸ್ವೀಕರಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜಿಲ್ಲೆಯ ಮೂಲನಿವಾಸಿಗಳಾಗಿ ಗುರುತಿಸಿ ಕೊಂಡಿರುವ ಕೊರಗ ಸಮುದಾಯ ಅತ್ಯಂತ ಅತೀ ಹಿಂದುಳಿದ ಸಮಾಜವಾಗಿದ್ದು, ಸಮಾಜದ ಮುಖ್ಯವಾಹಿನಿಗೆ ಬರುವ ಉದ್ದೇಶದಿಂದ ಕೊರಗ ಸಮುದಾಯದ ಯುವ ಜನತೆ ಶಿಕ್ಷಣದ ಮೂಲಕ ಉತ್ತಮ ಸಾಧನೆ ಮಾಡಿದ್ದು ಪ್ರತಿಭಾವಂತ ಯುವ ಜನತೆಗೆ ಸರಕಾರಿ ಉದ್ಯೋಗ ನೇರ ನೇಮಕಾತಿ ಮಾಡಲು ರಾಜ್ಯ ಸರಕಾರ ಮುಂದಾಗ ಬೇಕಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇಲಾಖೆಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗುವುವುದು ಹೇಳಿದರು.
ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಅಧ್ಯಕ್ಷೆ ಸುಶೀಲ ನಾಡ, ಮುಖಂಡ ರಾದ ಶೇಖರ ಕೆಂಜೂರು, ಕುಮಾರ ಕೆಂಜೂರು, ಪುತ್ರನ್ ಹೆಬ್ರಿ, ಪುನಿತ್ ಕಾರ್ಕಳ, ರೇಖಾ ಆತ್ರಾಡಿ, ತ್ರಿವೇಣಿ ಕಟಪಾಡಿ, ಪ್ರಜ್ಞಾ ಶಂಕರ ನಾರಾಯಣ, ಶೀನಾ ಬೆಳ್ಮಣ್ ಮೊದಲಾದವರು ಉಪಸ್ಥಿತರಿದ್ದರು.





