ತಪ್ಪು ತಿದ್ದಿಕೊಳ್ಳುವ ಅವಕಾಶ ನಮ್ಮ ಕೈಯಲ್ಲಿದೆ: ವಿಶು ಶೆಟ್ಟಿ

ಉಡುಪಿ, ಜ.1: ಮುಂಬಯಿ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಉಡುಪಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ 35ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಉದ್ಘಾಟನಾ ಸಮಾರಂಭವು ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸಭಾಗಂಣ ದಲ್ಲಿ ಗುರುವಾರ ಜರಗಿತು.
ಶಿಬಿರವನ್ನು ಉದ್ಘಾಟಿಸಿದ ಸಮಾಜ ಸೇವಕ ಹಾಗೂ ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಪ್ರಾಧಿಕಾರದ ಸದಸ್ಯ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ, ತಪ್ಪು ಮಾಡುವುದು ಸಹಜ ಅದನ್ನು ತಿದ್ದಿಕೊಳ್ಳುವ ಅವಕಾಶ ನಮ್ಮ ಕೈಯಲ್ಲಿದೆ. ಆ ಅವಕಾಶವನ್ನು ಬಳಸಿಕೊಂಡು ತಪ್ಪನ್ನು ತಿದ್ದಿಕೊಂಡು ಹೊಸ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಮನೋವೈದ್ಯ ಡಾ.ಪ್ರಕಾಶ್ ಸಿ.ತೋಳಾರ್ ಮಾತನಾಡಿ, ಮದ್ಯ ವ್ಯಸನವೆಂಬುದು ಮನೋ ರೋಗ. ಈ ರೋಗವನ್ನು ಗುಣಪಡಿಸಿ ಅದರಿಂದ ಹೊರಬರಲು ಸಾಧ್ಯ. ಇದರ ಕುರಿತು ಜಾಗೃತಿಯ ಮಹತ್ವವನ್ನು ಅರಿತು ಕೊಳ್ಳಬೇಕು ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಅಧ್ಯಕ್ಷ ಹಾಗೂ ಮಕ್ಕಳ ತಜ್ಞ ಡಾ.ಅಶೋಕ್ ಕುಮಾರ್, ಶಿಬಿರಾರ್ಥಿಗಳು, ಮದ್ಯವ್ಯಸನ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಉಡುಪಿ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಲತಾ ನಾಯಕ್, ಆಸ್ಪತ್ರೆಯ ಮನೋವೈದ್ಯರುಗಳಾದ ಡಾ.ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ.ಮಾನಸ್ ಇ.ಆರ್. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 5ವರ್ಷಕ್ಕಿಂತ ಹೆಚ್ಚಿನ ಸಮಯ ಮದ್ಯ ಮುಕ್ತ ಜೀವನವನ್ನು ನಡೆಸಿದ ಆರು ಮಂದಿಯನ್ನು ಸನ್ಮಾನಿಸಲಾಯಿತು. ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿ ವರ್ಗ ದವರಿಂದ ಮದ್ಯಪಾನದ ದುಷ್ಪರಿಣಾಮದ ಕುರಿತು ಸಮುದಾಯದಲ್ಲಿ ಪ್ರದರ್ಶಿಸಿದ ಬೀದಿನಾಟಕವನ್ನು ಪ್ರದರ್ಶಿಸಲಾಯಿತು.
ಆಸ್ಪತ್ರೆಯ ಆಪ್ತಸಮಾಲೋಚಕಿ ಪದ್ಮಾ ರಾಘವೇಂದ್ರ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮನಶಾಸ್ತ್ರಜ್ಞ ನಾಗರಾಜ್ ಮೂರ್ತಿ ವಂದಿಸಿದರು. ಆಪ್ತಸಮಾಲೋಚಕಿ ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು. ಸುಮಾರು 50 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ.







