ಸಿದ್ದಾಪುರ ಏತ ನೀರಾವರಿ ಯೋಜನೆ ಮೂಲ ಡಿಪಿಆರ್‌ನಂತೆ ಮಾಡಲಿ: ರೋಹಿತ್ ಶೆಟ್ಟಿ

ಕುಂದಾಪುರ, ಜ.2: ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಮೂಲ ಡಿಪಿಆರ್ ಪ್ರಕಾರ ಮಾಡಬೇಕು. ಮೂಲ ಯೋಜನೆಯನ್ನು ಕೈಬಿಟ್ಟು ಒಂದು ವೇಳೆ ರೈತರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಪಕ್ಷಾ ತೀತವಾದ ಎಲ್ಲರನ್ನು ಒಗ್ಗೂಡಿಸಿಕೊಂಡು ಸತ್ಯಾಗ್ರಹ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಪಂ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಯೋಜನೆಗೆ 2018ರಲ್ಲಿ ಸೌಕೂರು ಸಿದ್ದಾಪುರ ಏತ ನೀರಾವರಿ ಎಂದು ಆಗಿ ಬಳಿಕ ಸಿದ್ದಾಪುರ ಬಿಟ್ಟು ಹೋಗಿದೆ. 2019ರಲ್ಲಿ ಡಿಪಿಆರ್ ಆಗಿ 2021ರಲ್ಲಿ 165 ಕೋ.ರೂ. ಮಂಜೂರಾಗಿತ್ತು. ಮೊದಲ ಗುತ್ತಿಗೆದಾರರು ಕಾಮಗಾರಿ ಮಾಡದೇ ಇನ್ನೊಬ್ಬರು ಗುತ್ತಿಗೆ ವಹಿಸಿ 2 ತಿಂಗಳಿನಿಂದ ಕಾಮಗಾರಿ ಪ್ರಗತಿಯಲ್ಲಿದೆ. ಪೈಪ್‌ಲೈನ್ ಮಾಡಿ ಪಂಪ್ ಹೌಸ್ ಮಾಡುವಾಗ ಕೆಲಸಕ್ಕೆ ತಡೆ ನೀಡಲಾಯಿತು ಎಂದರು.
ಮಾಜಿ ಶಾಸಕ ಗೋಪಾಲ ಪೂಜಾರಿ ಮುಖ್ಯಮಂತ್ರಿಗೆ ನೀಡಿದ ಪತ್ರವನ್ನು ತಡೆಗೆ ಕಾರಣವಾಗಿ ಕೊಡಲಾಯಿತು. ಪ್ರಸ್ತುತ ವಿನ್ಯಾಸವು ವಾರಾಹಿ ಮೂಲ ನದಿಯ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ನೀಡುವಂತಿದೆ. ಶಿವನ ಲಿಂಗಕ್ಕೆ ತೊಂದರೆ ಆಗುತ್ತದೆ. ಮೂಲ ನದಿಯಲ್ಲಿ ನೀರು ಬತ್ತಿಹೋದರೆ ಜಲಚರಗಳು ನಾಶವಾಗುತ್ತವೆ. ಅಲ್ಲದೆ, ನದಿ ಪಾತ್ರದ ಅಂತರ್ಜಲ ಮಟ್ಟ ಕುಸಿದು ಸುತ್ತಮುತ್ತಲಿನ ಸಾವಿರಾರು ಎಕರೆ ಕೃಷಿ ಭೂಮಿ ಬಂಜರಾಗುವ ಭೀತಿ ಇದೆ ಎನ್ನುವುದು ಸುಳ್ಳು ಆರೋಪ. ಇದಕ್ಕೆ ಆಧಾರಗಳು ಏನು ಎಂದು ಅವರು ಪ್ರಶ್ನಿಸಿದರು.
4 ಗೇಟ್ ತೆರೆದರೆ 4500 ಕ್ಯುಸೆಕ್ ನೀರು ಬರುತ್ತದೆ. 3 ಗೇಟ್ ತೆರೆದರೆ 3375 ಕ್ಯುಸೆಕ್ ನೀರು ಬರುತ್ತದೆ. ಈಗ 6 ಸಾವಿರ ಹೆಕ್ಟೇರು ಕೃಷಿ ಭೂಮಿಗೆ ನೀರು ಹೋಗುತ್ತದೆ. ಇದು ಮೂಲ ಯೋಜನೆಯಂತೆಯೇ 15 ಸಾವಿರ ಹೆಕ್ಟೇರಿಗೆ ಹೋಗಬೇಕು. 1 ದಿನಕ್ಕೆ 66 ಕ್ಯೂಸೆಕ್ ನೀರು ಮಾತ್ರ ಏತ ನೀರಾವರಿಗೆ ಬೇಕಾಗುವುದು. ಹೊಳೆ ಶಂಕರ ನಾರಾಯಣದ ಶಿವಲಿಂಗಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಮೂಲ ಯೋಜನೆ ಪ್ರಕಾರ ಸರಕಾರದ ಅಣೆಕಟ್ಟಿನಿಂದಲೇ ಎಡದಂಡೆ, ಬಲದಂಡೆಗೆ ನೀರು ತೆಗೆಯಬೇಕು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹರ್ಷ ಜಿ., ಭೋಜರಾಜ ಶೆಟ್ಟಿ, ಸಿದ್ದಾಪುರ ಪಂಚಾಯತ್ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಮಾಜಿ ಅಧ್ಯಕ್ಷ ಶೇಖರ ಕುಲಾಲ್, ಪ್ರಕಾಶ್ ಶೆಟ್ಟಿ, ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.







