ಉಡುಪಿ ಆದರ್ಶ ಆಸ್ಪತ್ರೆಯ ಕ್ಯಾನ್ಸರ್ -ತೆರೆದ ಹೃದಯದ ಶಸ್ತ್ರಚಿಕಿತ್ಸೆ ವಿಭಾಗ ಉದ್ಘಾಟನೆ

ಉಡುಪಿ, ಜ.15: ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ನೂತನ ಕ್ಯಾನ್ಸರ್ ಹಾಗೂ ತೆರೆದ ಹೃದಯದ ಶಸ್ತ್ರಚಿಕಿತ್ಸಾ ವಿಭಾಗದ ಉದ್ಘಾಟನೆ ಕಾರ್ಯಕ್ರಮ ಗುರುವಾರ ನಡೆಯಿತು.
ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಂದು ರೋಗಕ್ಕೂ ಮೂಲ ಕಾರಣ ಅಜೀರ್ಣ. ಮಾನಸಿಕ ಕಾಯಿಲೆಗಳಿಗೂ ಇದೇ ಕಾರಣವಾಗಿದೆ. ನಾವು ಸೇವಿಸುವ ಆಹಾರವನ್ನು ಹಿಡಿತದಲ್ಲಿ ಇಟ್ಟುಕೊಂಡರೇ ಯಾವುದೇ ರೋಗಗಳು ಬರುವುದಿಲ್ಲ ಎಂದು ಹೇಳಿದರು.
ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಯಾವುದೇ ರೋಗಿ ಕಾಯಿಲೆಯೊಂದಿಗೆ ಆಸ್ಪತ್ರೆಗೆ ಚಿಕಿತ್ಸೆ ಬಂದ ಬಳಿಕ ಜೀವನದ ಸಾಕಷ್ಟು ಪಾಠ ಕಲಿಯುತ್ತಾನೆ. ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾನೆ ಹಾಗೂ ಪರೋಪಕಾರಿ ಮನೋಭಾವ ಬೆಳೆಸುತ್ತಾನೆ. ಇಲ್ಲಿಗೆ ಬರುವ ರೋಗಿ ಚಿಕಿತ್ಸೆ ಪಡೆದು ನಗುಮುಖದೊಂದಿಗೆ ಮನೆಗೆ ಮರಳಿ, ಮುಂದೆ ಎಂದಿಗೂ ಆಸ್ಪತ್ರೆಗೆ ಬಾರದ ರೀತಿ ಆರೋಗ್ಯವಂತರಾಗಲಿ ಎಂದು ಹಾರೈಸಿದರು.
ಕಾರ್ಡಿಯೋಥೊರಾಸಿಕ್ ಮತ್ತು ವಾಸ್ಕುಲರ್ ಶಸ್ತ್ರಚಿಕಿತ್ಸಕ ಡಾ.ಗುರು ಪ್ರಸಾದ್ ಡಿ. ರೈ ಮಾತನಾಡಿ, ಆಸ್ಪತ್ರೆಯಲ್ಲಿ ಹೃದಯದ ತುರ್ತು ಮತ್ತು ನಿರ್ದಿಷ್ಟ ಶಸ್ತ್ರಚಿಕಿತ್ಸೆಯನ್ನು ಆರಂಭಿಸಲಾಗಿದ್ದು, ಮುಂದೆ ಬೈಪಾಸ್ ಸರ್ಜರಿ ಹಾಗೂ ಕಪಾಟು ಬದಲಾವಣೆ ಸೇರಿದಂತೆ ಅತ್ಯಾಧುನಿಕ ಚಿಕಿತ್ಸೆಯನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ಅನಂತ್ ಎಸ್.ಮಠದ್, ತಜ್ಞ ವೈದ್ಯ ಡಾ.ಸುಕೇನ್ ಶೆಟ್ಟಿ, ಹೃದ್ರೋಗ ತಜ್ಞರಾದ ಡಾ.ಶ್ರೀಕಾಂತ್ ಕೃಷ್ಣ, ಡಾ.ವಿಶು ಕುಮಾರ್, ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಹಿರಿಯ ವೈದ್ಯಕೀಯ ತಜ್ಞ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆದರ್ಶ ಆಸ್ಪತ್ರೆಯ ನಿರ್ದೇಶಕ ಮತ್ತು ಹೃದ್ರೋಗ ತಜ್ಞ ಡಾ.ಸುಹಾಸ್ ಜಿ.ಸಿ. ಆಸ್ಪತ್ರೆಯ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಅನುಶ್ರೀ ಆಚಾರ್ ಕಾರ್ಯಕ್ರಮ ನಿರೂಪಿಸಿದರು.







