ಸದೃಢ ಸಮಾಜದ ನಿರ್ಮಾಣದಲ್ಲಿ ಎಲ್ಲರ ಪಾತ್ರ ಮುಖ್ಯ: ಪ್ರೊ.ಪೇಮ್‌ನಾಥ್

ಶಿರ್ವ, ಜ.31: ಆರೋಗ್ಯ ಪೂರ್ಣ ಸಮಾಜದಲ್ಲಿ ಎಲ್ಲಾ ವೃತ್ತಿಗಳ ಪಾತ್ರವೂ ಪ್ರಾಮುಖ್ಯವಾಗಿದೆ. ಹಿಂದೆ ಪರಂಪರಗತವಾಗಿ ಒಂದೊಂದು ಸಮುದಾಯಗಳ ಕುಲಕಸುಬುಗಳಾಗಿ ಬೆಳೆದು ಬಂದಿದ್ದು, ಇಂದು ಜ್ಞಾನದ ಆವಿಷ್ಕಾರಗಳು ಬೆಳೆದಂತೆ ಶಿಕ್ಷಣದ ಆಧಾರದ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಬಹುದಾಗಿದೆ ಎಂದು ಶಿರ್ವ ಸಂತಮೇರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪೇಮ್‌ನಾಥ್ ಹೇಳಿದ್ದಾರೆ.
ರೋಟರಿ ಅಂತಾರಾಷ್ಟ್ರೀಯ ವೃತ್ತಿ ಮಾಸಾಚರಣೆಯ ಅಂಗವಾಗಿ ಶುಕ್ರವಾರ ಬಂಟಕಲ್ಲು ರೋಟರಿ ಭವನದಲ್ಲಿ ಏರ್ಪಡಿಸಲಾದ ಸೌಹಾರ್ದ ಸಮ್ಮಿಲನ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಯಾವುದೇ ವೃತ್ತಿಯನ್ನು ಪ್ರೀತಿಸಿ, ಶ್ರದ್ಧೆ, ಪ್ರಾಮಾಣಿಕತೆುಂದ ನಿರ್ವಹಿಸಿ ದಾಗ ಯಶಸ್ಸನ್ನು ಸಾಧಿಸಬಹುದು. ಪ್ರತೀಯೊಂದು ವೃತ್ತಿಗೂ ಅದರದ್ದೇ ಆದ ಗೌರವ ಇದೆ. ಸದೃಢ ಸಮಾಜದ ನಿರ್ಮಾಣದಲ್ಲಿ ಎಲ್ಲಾ ವೃತ್ತಿ ಸೇವೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜಮುಖಿ ಸಾಧನೆಗಳನ್ನು ಮಾಡಿದ ತೆಂಗಿನ ಕಾಯಿ ಕೀಳುವ ಮಧುಕರ, ರಿಕ್ಷಾ ಚಾಲಕ ತಿಯೋಡೋರ್ ಮತಾಯಸ್ ಬಿ.ಸಿ.ರೋಡ್, ಬಾಣಂತಿ ಮದ್ದು, ಅಡುಗೆಯ ಸೆಲಿನ್ ಮೆಂಡೋನ್ಸಾ, ಹೊಟೇಲ್ ಕಾರ್ಮಿಕ ಸೋಮನಾಥ, ಪಿಗ್ಮಿ ಸಂಗ್ರಾಹಕ ಸತೀಶ್, ಸೈಕಲ್ ರಿಪೇರಿ ತಂತ್ರಜ್ಞ ಸನಾವುಲ್ಲಾ ಅಸಾದಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ರೋಟರಿ ಅದ್ಯಕ್ಷ ವಿಲಿಯಮ್ ಮಚಾದೊ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ವಿಟ್ಠಲ್ ನಾಯಕ್ ಪ್ರಾಸಾವ್ತಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೆಲ್ವಿನ್ ಡಿಸೋಜ, ಮೈಕಲ್ ಮತಾಯಸ್, ಜಾಕ್ಲಿನ್ ಡಿಸೋಜ, ವಿಕ್ಟರ್ ಅಲ್ಮೇಡಾ, ಜೆಸಿಂತಾ ಡಿಸೋಜ, ರಘುಪತಿ ಐತಾಳ್ ಪರಿಚಯಿಸಿದರು.
ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ.ಪುಂಡಲೀಕ ಮರಾಠೆ ರೋಟರಿ ವೃತ್ತಿ ಸೇವಾ ಮಾಸಾಚರಣೆಯ ಮಹತ್ವ ತಿಳಿಸಿದರು. ವಿಷ್ಣುಮೂರ್ತಿ ಸರಳಾಯ ಶುಭಾಶಯ ಕೋರಿದರು. ಸಾರ್ಜಂಟ್ ರಫಾಯಲ್ ಮತಾಯಸ್, ಕ್ಲಬ್ ಸೇವಾ ನಿರ್ದೇಶಕ ಹೆರಾಲ್ಡ್ ಕುಟಿನ್ಹೊ ಸಹಕರಿಸಿದರು. ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ವಂದಿಸಿದರು.







