‘ಹನುಮ ಕಲ್ಯಾಣ’ ಪೌರಾಣಿಕ ಆಖ್ಯಾನದ ಪ್ರದರ್ಶನ

ಬ್ರಹ್ಮಾವರ, ಫೆ.2: ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್‌ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಾದ ನೂಪುರ ಯಕ್ಷೇತ್ಥಾನ ಟ್ರಸ್ಟ್ ವಂಡಾರು ವತಿಯಿಂದ ಶುಭಾಶಯ ಜೈನ್ ವಿರಚಿತ ಹನುಮ ಕಲ್ಯಾಣ ಎಂಬ ಪೌರಾಣಿಕ ಆಖ್ಯಾನದ ಪ್ರದರ್ಶನ ರವಿವಾರ ಮೈರ್‌ಕೊಮೆಯ ಸಪ್ತಪದಿ ಕನ್ವೆನ್‌ಷನ್ ಹಾಲ್‌ನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಗೋಶಾಲೆಯ ಮುಖ್ಯಸ್ಥರಿಗೆ ಕಾರ್ಯಕ್ರಮ ದಿಂದ ಸಂಗ್ರಹವಾದ ಒಂದು ಲಕ್ಷ ರೂ. ಮೊತ್ತದ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಉಳಿದ ಒಂದು 1.30ಲಕ್ಷರೂ. ಮೊತ್ತವನ್ನೂ ಗೋಶಾಲೆಗೆ ಹಸ್ತಾಂತರಿಸುವ ಕುರಿತು ನಾದ ಟ್ರಸ್ಟ್ ಅಧ್ಯಕ್ಷ ಗೋವಿಂದ ವಂಡಾರು ಘೋಷಣೆ ಮಾಡಿದರು.
ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ಮುಖ್ಯಸ್ಥ ರಾಜೇಂದ್ರ ಚಕ್ಕೆ, ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀಕ್ಷೇತ್ರ ಮಂದಾರ್ತಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಧನಂಜಯ ಶೆಟ್ಟಿ, ಯಕ್ಷ ಪೋಷಕರಾದ ಚೋರಾಡಿಯ ರಾಜೀವ ಶೆಟ್ಟಿ, ಕೊಕ್ಕರ್ಣೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ವಂಡಾರು, ಯಕ್ಷಗಾನ ಪೋಷಕ ಆಂದ್ರೂ ಡಿಸಿಲ್ವ, ಕೊಕ್ಕರ್ಣೆಯ ರಾಮಚಂದ್ರ ಶಾಸ್ತ್ರಿ, ಪ್ರಸಂಗಕರ್ತೆ ಶುಭಾಶಯ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಾಪಕರಾದ ಶಶಿಧರ್ ಶೆಟ್ಟಿ ನಂಚಾರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.







