ತ್ಯಾಜ್ಯಗಳ ಬ್ಲ್ಯಾಕ್‌ಸ್ಪಾಟ್‌ನಲ್ಲಿ ಅರಳುತ್ತಿರುವ ಹೂವುಗಳು: ಬೀಡಿನಗುಡ್ಡೆ ಮೈದಾನದ ಬಳಿ ಉದ್ಯಾನವನ ನಿರ್ಮಾಣ

ಉಡುಪಿ, ಫೆ.3: ಉಡುಪಿ ನಗರವನ್ನು ಸುಂದರ ನಗರವಾಗಿಸುವ ಪ್ರಯತ್ನದ ಅಂಗವಾಗಿ ನಗರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಇರುವ ಬ್ಲ್ಯಾಕ್‌ಸ್ಪಾಟ್‌ಗಳನ್ನು ನಿರ್ಮೂಲನಗೊಳಿಸುವ ನಿಟ್ಟಿನಲ್ಲಿ ಅಂಥ ಕಡೆಗಳಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡುವ ಕಾಯಕಕ್ಕೆ ನಗರಸಭೆ ಮುಂದಾಗಿದೆ.
ಉಡುಪಿ ನಗರಸಭೆಯ ಎಸ್.ಬಿ.ಎಂ 2.0ರ ಐಇಸಿ ಘಟಕದ ಇಂಟರ್ ಪರ್ಸನಲ್ ಕಮ್ಯೂನಿಕೇಶನ್ ಸ್ಕಿಲ್ ಉಪ ಘಟಕದಡಿ ನೇಮಕಗೊಂಡ 24 ಮಂದಿ ಕಮ್ಯೂನಿಟಿ ಮೊಬಿಲೈಸರ್‌ಗಳು ಪೌರಾಯುಕ್ತರ ಮಾರ್ಗದರ್ಶನದಲ್ಲಿ ಉಡುಪಿ ನಗರಸಭೆಯ ಆರೋಗ್ಯ ನಿರೀಕ್ಷರು ಮತ್ತು ಸೂಪರ್‌ವೈಸರ್‌ಗಳ ಸಹಯೋಗದೊಂದಿಗೆ, ಉಡುಪಿ ನಗರವನ್ನು ಸ್ವಚ್ಛವಾಗಿರಿಸುವ ಕಾಯಕದಲ್ಲಿ ಇದೀಗ ನಿರಂತರತೊಡಗಿಸಿಕೊಂಡಿದ್ದಾರೆ.
ಇದರ ಮುಂದುವರಿದ ಭಾಗವಾಗಿ ನಗರವಿಭಾಗದ ಕಮ್ಯೂನಿಟಿ ಮೊಬಿಲೈಸರ್‌ಗಳು ಬೀಡಿನಗುಡ್ಡೆ ಮೈದಾನದ ಹತ್ತಿರದ ಬ್ಲಾಕ್‌ಸ್ಟಾಟ್ (ತ್ಯಾಜ್ಯ ವಿಶೇಷವಾಗಿ ಸಂಗ್ರಹಗೊಳ್ಳುವ ಪ್ರದೇಶ) ನಲ್ಲಿ ಸುಂದರ ಗಾರ್ಡನ್ ನಿರ್ಮಿಸಿ ಅಲ್ಲಿ ಮತ್ತೆ ಕಸದ ರಾಶಿ ಬೀಳದಂತೆ ಬ್ಯಾನರ್ ಅಳವಡಿಸಿದ್ದಾರೆ.
ಇದು ನಗರದಲ್ಲಿ ಬ್ಲ್ಯಾಕ್‌ಸ್ಪಾಟ್‌ಗಳೆಂದು ಗುರುತಿಸಲ್ಪಟ್ಟ ಜಾಗದಲ್ಲಿ ಮುಂದುವರಿಯಲಿದೆ. ಕಸಗಳನ್ನು ತೆಗೆದು ಅದನ್ನು ಜನರು ವಿಹರಿಸುವ ಪಾರ್ಕ್ ಮಾಡುವ ಕಾರ್ಯ ನಿರಂತರ ನಡೆಯಲಿದೆ. ನಗರಸಭೆಯ ಕಮ್ಯೂನಿಟಿ ಮೊಬಿಲೈಸರ್‌ಗಳ ಈ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಉಡುಪಿ ಜಿಲ್ಲೆ ಸ್ವಚ್ಛ ಜಿಲ್ಲೆಯಾಗಲಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ನಗರಸಭೆಯ ಪರಿಸರ ಇಂಜಿನಿಯರ್ ರವಿಪ್ರಕಾಶ್, ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಸಾರ್ವಜನಿ ಕರು ಹಾಕುವ ಕಸವನ್ನು ವಿಲೇವಾರಿ ಮಾಡುವುದರಿಂದ ಅಲ್ಲಿ ಮತ್ತೆ ಮತ್ತೆ ಕಸದ ರಾಶಿ ಬೀಳುತ್ತಲೇ ಇರುತ್ತದೆ ಹೊರತು ಕಸ ಕಡಿಮೆಯಾಗುವುದಿಲ್ಲ. ಆದ್ದರಿಂದ ಸ್ವಚ್ಛ ಉಡುಪಿ ಪರಿಕಲ್ಪನೆಗೆ ತ್ಯಾಜ್ಯ ವಿಲೇವಾರಿ ಮಾಡುವು ದೊಂದೇ ಪರಿಹಾರವಲ್ಲ. ಅಲ್ಲದೇ ಕಸ ಹಾಕಿದವರಿಗೆ ದಂಡ ವಿಧಿಸುವುದು ಕೂಡಾ ನಿರಂತರವಾಗಿ ಸಾಧ್ಯವಾ ಗುವುದಿಲ್ಲ ಎಂದರು.
ಆದ್ದರಿಂದ ತ್ಯಾಜ್ಯ ರಾಶಿ ಇರುವ ಪ್ರದೇಶದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಿ ಆ ಪ್ರದೇಶವನ್ನು ಸುಂದರ ಪ್ರದೇಶವಾಗಿ ಮಾರ್ಪಾಡು ಮಾಡಿ ಉದ್ಯಾನವನ ನಿರ್ಮಿಸಿ ಬ್ಯಾನರ್ ಹಾಕುವ ಮೂಲಕ ಬ್ಲ್ಯಾಕ್‌ಸ್ಪಾಟ್‌ಗಳನ್ನೇ ನಿರ್ಮೂಲನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಇದೇ ರೀತಿ ಬ್ಲಾಕ್‌ಸ್ಪಾಟ್‌ಗಳನ್ನು ಬ್ಯೂಟಿಫಿಕೇಶನ್ ಮಾಡುವ ಉದ್ದೇಶವನ್ನು ನಗರಸಭೆ ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಆರೋಗ್ಯ ನಿರೀಕ್ಷಕ ಸತೀಶ್, ಪ್ರಕಾಶ್ ಪ್ರಭು, ಹರೀಶ್ ಬಿಲ್ಲವ ಹಾಗೂ ಸಿಟಿ ಭಾಗದ ಸೂಪರ್‌ವೈಸರ್‌ಗಳು, ಕಮ್ಯೂನಿಟಿ ಮೊಬಿಲೈಸರ್‌ಗಳು ಉಪಸ್ಥಿತರಿದ್ದರು.







