ರಾಜ್ಯದಲ್ಲಿ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಮನೋವೈದ್ಯ ಡಾ.ಪಿ.ವಿ.ಭಂಡಾರಿ ಸ್ವಾಗತ

ಡಾ.ಪಿ.ವಿ.ಭಂಡಾರಿ
ಉಡುಪಿ, ಮಾ.6: ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ವಿಧಾನಸೌಧ ದಲ್ಲಿ ದಾಖಲೆಯ 17ನೇ ಬಜೆಟ್ ಮಂಡಿಸಿ ಮಾಡಿದ ಭಾಷಣದ ವೇಳೆ ರಾಜ್ಯದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರುವ ನಿರ್ಧಾರ ಪ್ರಕಟಿಸಿರುವುದನ್ನು ನಾಡಿನ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಸ್ವಾಗತಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಕಲಿಕೆಗೆ ಮೊಬೈಲ್ ಬಳಸಲು ಅವಕಾಶ ನೀಡಿದ ಬಳಿಕ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ಅಡ್ಡ ಪರಿಣಾಮ ಗಳ ಕುರಿತು ವ್ಯಾಪಕ ಜನಜಾಗೃತಿ ಮೂಡಿಸುತ್ತಿರುವ ಡಾ.ಭಂಡಾರಿ ಅವರು ಇದೀಗ ಸರಕಾರ ರಾಜ್ಯದಲ್ಲಿ ಡಿಜಿಟಲ್ ಪಾಲಿಸಿ ರೂಪಿಸಲು ಮುಂದಾಗಿರುವ ಕ್ರಮವನ್ನು ಸ್ವಾಗತಾರ್ಹ ಕ್ರಮ ಎಂದು ಬಣ್ಣಿಸಿದ್ದಾರೆ.
ಒಬ್ಬ ಮನೋವೈದ್ಯನಾಗಿ ನಾನು ಸರಕಾರದ ಈ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮಗಳಾಗುತ್ತಿವೆ. ಆಸ್ಪತ್ರೆಯ ವಾರ್ಡ್ ನಲ್ಲಿ ಪ್ರತಿದಿನವೆಂಬಂತೆ ಇಬ್ಬರು 18 ವರ್ಷದೊಳಗಿನ ಮಕ್ಕಳು ಮಾನಸಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ದಾಖಲಾಗು ತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತರಿಂದ ಮೋಸ ಹೋಗುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಸರ್ಕಾರದ ಈ ನಿರ್ಧಾರ ಸಮಯೋಚಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ನಿಯಮವನ್ನು ಜಾರಿಗೆ ತರುವುದು ಸುಲಭವಲ್ಲ. 18 ವರ್ಷದೊಳಗಿನವರಿಗೆ ಬೀಡಿ-ಸಿಗರೇಟು ಮಾರಾಟ ನಿಷೇಧಿ ಸುವ ಕಾನೂನು ಇದ್ದರೂ ಅದು ಎಷ್ಟು ಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ ಎಂದರು.
ಅದೇ ರೀತಿ ಮೊಬೈಲ್ ಫೋನ್ ಸಹ ಖಾಸಗಿ ಸ್ವತ್ತು ಆಗಿರುವುದರಿಂದ ಮಕ್ಕಳು ಅದರಲ್ಲಿ ಏನು ನೋಡುತ್ತಾರೆ ಎಂಬುದನ್ನು ನಿಯಂತ್ರಿಸುವುದು ಕಷ್ಟ. ಈ ಸಮಸ್ಯೆಯನ್ನು ನಿಯಂತ್ರಿಸಲು ಪೋಷಕರು ಹಾಗೂ ಶಾಲಾ ಆಡಳಿತದ ಸಹಕಾರ ಅತ್ಯಗತ್ಯ. ಈಗಾಗಲೇ ಕೆಲವು ಪ್ರತಿಷ್ಠಿತ ಶಾಲೆಗಳು ಮೊಬೈಲ್ ಫೋನ್ಗಳನ್ನು ಶಾಲೆಗೆ ತರಲು ಅವಕಾಶ ನೀಡುತ್ತಿಲ್ಲ. ಸರಕಾರಿ ಶಾಲೆಗಳಲ್ಲೂ ಶಾಲಾ ಅವಧಿಯಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ ಶಾಲೆಯ ಹೊರಗಡೆ ನಿಯಂತ್ರಣ ಹಾಕುವುದು ಸವಾಲಿನ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಮುಂದಿನ ತಲೆಮಾರಾದರೂ ಮೊಬೈಲ್ ನಿಯಂತ್ರಣಕ್ಕೆ ಒಳಪಡಬಹುದು. ಈಗಿನ ಹದಿಹರೆಯದವರನ್ನು ನಿಯಂತ್ರಿಸುವುದು ಕಷ್ಟವಾದರೂ, 10-12 ವರ್ಷದ ಮಕ್ಕಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಮನೋವೈದ್ಯರಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನೇಕ ಯುವಜನರು ಆತಂಕ ಹಾಗೂ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಅದನ್ನು ಬಿಡಲಾಗದ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಶಾಲೆ ಹಾಗೂ ಕಾಲೇಜುಗಳನ್ನು ತೊರೆಯುವ ಪ್ರಕರಣಗಳೂ ಹೆಚ್ಚುತ್ತಿದೆ. ಭವಿಷ್ಯದ ಸಮಾಜದ ಹಿತದೃಷ್ಟಿ ಯಿಂದ ಸರಕಾರ ತೆಗೆದುಕೊಂಡಿರುವ ಈ ಜನಪರ ನಿರ್ಧಾರವನ್ನು ಸ್ವಾಗತಿಸಬೇಕು ಎಂದು ಡಾ. ಪಿ.ವಿ.ಭಂಡಾರಿ ಹೇಳಿದ್ದಾರೆ.







