ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ!

ಕುಂದಾಪುರ, ಮಾ.6: ಪುರಸಭೆ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ವಾಹನ ಚಾಲಕರು- ಮಾಲಕರಿಂದ ಶುಲ್ಕ ಪಡೆಯುವ ವ್ಯವಸ್ಥೆ ಜಾರಿಗೆ ಕುಂದಾಪುರ ಪುರಸಭೆ ಮುಂದಾಗಿದೆ. ಪಾವತಿ ಪಾರ್ಕಿಂಗ್(ಪೇ ಪಾರ್ಕಿಂಗ್) ವ್ಯವಸ್ಥೆಗೆ ಮುಂದಾಗಿರುವ ಪುರಸಭೆಯ ನಡೆ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆಯಾಗಲಿದ್ದು, ರಸ್ತೆಬದಿ ವಾಹನ ನಿಲ್ಲಿಸಲು ಶುಲ್ಕ ವಿಧಿಸುವುದರಿಂದ ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು ಮತ್ತು ವ್ಯಾಪಾರಕ್ಕೆ ಬರುವ ಗ್ರಾಹಕರು ಅನಗತ್ಯ ತೊಂದರೆ ಅನುಭವಿಸ ಬೇಕಾಗುತ್ತದೆ. ಇದರಿಂದ ನಗರದ ವ್ಯಾಪಾರ ಚಟುವಟಿಕೆಗಳ ಮೇಲೂ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಇದೆ. ಇದು ಜನ ವಿರೋಧಿ ನಡೆಯಾಗಿದ್ದು, ಕೂಡಲೇ ಈ ನಿರ್ಣಯ ಹಿಂಪಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೇ ಪಾರ್ಕಿಂಗ್: ಕುಂದಾಪುರ ನಗರ ವೇಗವಾಗಿ ಬೆಳೆಯುತ್ತಿದ್ದು, ಬಹುತೇಕ ಕಡೆ ವಾಹನಗಳ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಕೆಲವು ದಿನವಂತೂ ವಾಹನಗಳ ದಟ್ಟಣೆ ಜಾಸ್ತಿಯಿರುತ್ತದೆ. ಅದಕ್ಕಾಗಿ ಕಳೆದ ಅಕ್ಟೋಬರ್ ನಲ್ಲಿ ಪುರಸಭೆಯ ಸಾಮಾನ್ಯ ಸಭೆಯು ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ತೀರ್ಮಾನ ಕೈಗೊಂಡಿತ್ತು. ಇದರಿಂದ ವಾಹನಗಳ ನಿಲುಗಡೆ ಸಮಸ್ಯೆ ಬಗೆಹರಿಯಲಿದೆ ಎಂಬುದು ಪುರಸಭೆಯ ಆಶಯ.
ಎಲ್ಲೆಲ್ಲಿ ನಿಲುಗಡೆ ಅವಕಾಶ?: ವಾಹನಗಳ ನಿಲುಗಡೆ ಶುಲ್ಕ ವಿಧಿಸಲು ಪುರಸಭೆಯು ಈಗಾಗಲೇ ಟೆಂಡರ್ ಕರೆದಿದ್ದು, ಎ.7ರಂದು ಪುರಸಭೆ ಸಭಾಂಗಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ 10 ರೂ., ಲಘು ವಾಹನಗಳಿಗೆ 20 ರೂ. ನಿಗದಿಪಡಿಸಿದೆ. ದ್ವಿಚಕ್ರ ವಾಹನ ಗಳಿಗೆ ನ್ಯೂ ಪ್ರೀತಮ್ ಹೇರ್ ಡ್ರೆಸ್ಸಸ್ ನಿಂದ ಸುಂದರ್ ಎಲೆಕ್ಟ್ರಾನಿಕ್ ಅಂಗಡಿಯವರೆಗೆ, ಉದಯ ಪೂರ್ಣಿಮಾ ಹೋಟೆಲ್ ಎದುರು, ಪೂರ್ಣಿಮಾ ಟಾಕೀಸ್ ಎದುರು, ಕುಂದೇಶ್ವರ ದೇವಸ್ಥಾನದ ರಸ್ತೆ, ವಿಕೆಆರ್ ಶಾಲೆಯಿಂದ ಸಿಎಸ್‌ಐ ಸ್ಮಶಾನದ ಎದುರುವರೆಗೆ, ಗಜಾನನ ಸೈಕಲ್ ಅಂಗಡಿ ಮತ್ತು ಹಳೆ ಉಷಾ ಹೋಟೆಲ್ ಎದುರು, ಡಿಪ್ರೋಮೇಟ್ ಹೋಟೆಲ್ ನಂತರ ಫ್ಯಾಷನ್ ವಲ್ಡ್ ಬಟ್ಟೆ ಮಳಿಗೆ ಎದುರು, ಹೋಟೆಲ್ ಶಿವಪ್ರಸಾದ್ ಎದುರು, ಕುಂದಾಪುರ ಬುಕ್ ಹೌಸ್ ನಿಂದ ಸ್ಟಿಲ್ ಸೆಂಟರ್ ಎದುರು ನಿಲುಗಡೆ ಮಾಡಬಹುದು.
ಇನ್ನು ಲಘು ವಾಹನಗಳಿಗೆ ಶೆಟ್ಟಿ ಬಿಲ್ಡಿಂಗ್ ನಿಂದ ಪಾರಿಜಾತ ಹೋಟೆಲ್ ಎದುರುವರೆಗೆ, ಪೂರ್ಣಿಮಾ ಟಾರ್ಕಿಸಿನ ನಂತರದ ಶೇಟ್ ಬಿಲ್ಡಿಂಗ್ ನಿಂದ ಲಕ್ಷ್ಮೀ ನಾರಾಯಣ ದೇವಸ್ಥಾನದ ಎದುರಿನವರೆಗೆ, ಎಚ್‌ಎಂಎಂ ಶಾಲೆ ಎದುರು, ಕನ್ವರ್ಸಿಂಗ್ ರಸ್ತೆಯಿಂದ ಕುಂದಾಪುರ ಬುಕ್ ಹೌಸ್‌ವರೆಗೆ, ಸ್ಟೀಲ್ ಸೆಂಟರ್ ಅಂಗಡಿಯಿಂದ ಹೋಟೆಲ್ ಡಿಪ್ರೋಮೇಟ್ ಎದುರು, ಫ್ಯಾಷನ್ ವರ್ಲ್ಡ್ ಅಂಗಡಿ ನಂತರ ಸಟ್ವಾಡಿ ಸುಂದರ ಶೆಟ್ಟಿ ಅಂಗಡಿ ಎದುರುವರೆಗೆ, ಆಟೋ ಸ್ಟೋರ್ಸ್ ಅಂಗಡಿಯಿಂದ ಹೋಟೆಲ್ ಶಿವಪ್ರಸಾದ್ ಲಾಡ್ಜ್‌ಗೆ ಹೋಗುವ ರಸ್ತೆ, ಸಾಯಿ ಡಿಪಾರ್ಟ್‌ಮೆಂಟ್ ಅಂಗಡಿಯಿಂದ ಕುಶಲ ಹೆಗ್ಡೆ ಬಿಲ್ಡಿಂಗ್ ಎದುರುವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಪುರಸಭೆ ತೀರ್ಮಾನಿಸಿದೆ.
"ಪಾರ್ಕಿಂಗ್ ಶುಲ್ಕ ವಸೂಲಿ ನಿರ್ಣಯ ಖಂಡನೀಯ ಮತ್ತು ಜನ ವಿರೋಧಿ ಕ್ರಮ. ಸಾರ್ವಜನಿಕ ರಸ್ತೆಗಳು ಜನರ ಸಾಮಾನ್ಯ ಬಳಕೆಗೆ ಇರುವುದು. ಅಂತಹ ಸ್ಥಳಗಳಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಸಾಮಾನ್ಯ ಜನರ ಮೇಲೆ ಮತ್ತೊಂದು ಆರ್ಥಿಕ ಹೊರೆ ಹಾಕುವ ಪ್ರಯತ್ನ ಮಾಡುತ್ತಿರುವುದು ಅಕ್ಷಮ್ಯ. ಇದರಿಂದ ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು ಮತ್ತು ವ್ಯಾಪಾರಕ್ಕೆ ಬರುವ ಗ್ರಾಹಕರಿಗೆ ತೊಂದರೆ ಆಗಲಿದೆ. ಟೆಂಡರ್ ನಿರ್ಣಯ ತಕ್ಷಣವೇ ಹಿಂಪಡೆಯಬೇಕು"
-ಚಂದ್ರಶೇಖರ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ
"ಅಭಿವೃದ್ಧಿ ವಿಚಾರದಲ್ಲಿ ಕುಂದಾಪುರಕ್ಕೆ ಬೇಕಾದ ವ್ಯವಸ್ಥೆ ಮಾಡದ ಪುರಸಭೆಯು ಪಾರ್ಕಿಂಗ್ ಹೆಸರಲ್ಲಿ ಸುಲಿಗೆಗೆ ಹೊರಟಿದೆ. ಇದರಿಂದ ದಿನ ನಿತ್ಯ ಅಂಗಡಿ ಮಾಲಿಕರು, ವಾಹನ ಮಾಲಕರು, ಟೆಂರ್ಡ ವಹಿಸಿಕೊಂಡವರ ಮಧ್ಯೆ ಬೀದಿ ಕಾದಾಟ ನಡೆಯುವುದಂತೂ ಖಚಿತ"
- ಕಿಶೋರ್ ಕುಮಾರ್ ಕುಂದಾಪುರ, ಮಾಜಿ ಅಧ್ಯಕ್ಷರು, ಉಡುಪಿ ಜಿಲ್ಲಾ ಬಿಜೆಪಿ
"ಹಿಂದಿನ ಪುರಸಭೆಯ ನಿರ್ಣಯ ಇಟ್ಟುಕೊಂಡು ಮುಖ್ಯಾಧಿಕಾರಿಗಳು ಪಾರ್ಕಿಂಗ್ ಶುಲ್ಕ ವಸೂಲಿಗೆ ಟೆಂರ್ಡ ಕರೆದಿರುವುದು ಜನವಿರೋಧಿ ಕ್ರಮ. ಪ್ರತಿಯೊಂದಕ್ಕೂ ತೆರಿಗೆ ಪಡೆದುಕೊಂಡು ಈಗ ಹೊಸದಾಗಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಹೊರಟಿರುವುದು ಕಾನೂನು ವಿರೋಧಿ ಕ್ರಮ. ಇದನ್ನು ಕೂಡಲೇ ನಿಲ್ಲಿಸಬೇಕು"
-ಕೆ.ವಿಕಾಸ್ ಹೆಗ್ಡೆ, ಕಾಂಗ್ರೆಸ್ ವಕ್ತಾರರು, ಉಡುಪಿ ಜಿಲ್ಲೆ
ಪೇ ಪಾರ್ಕಿಂಗ್ ವಿರುದ್ಧ ಎಸಿಗೆ ಮನವಿ
ಕುಂದಾಪುರ ಪುರಸಭೆ ವ್ಯಾಪ್ತಿಯ ವಿವಿಧೆಡೆಗಳಲ್ಲಿ ವಾಹನಗಳ ನಿಲುಗಡೆಗೆ ಶುಲ್ಕ ವಿಧಿಸುವ ವ್ಯವಸ್ಥೆ ಜಾರಿಗೊ ಳಿಸಲು ಹಾಗೂ ಅದಕ್ಕಾಗಿ ಟೆಂಡರ್ ಮೂಲಕ ವಸೂಲಿ ಹಕ್ಕು ನೀಡುವ ನಿರ್ಧಾರ ಕೈಗೊಂಡಿರುವ ಪುರಸಭೆ ಆ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಶುಕ್ರವಾರ ಸಹಬಾಳ್ವೆ ಕುಂದಾಪುರ, ಸಿಪಿಐಎಂ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸಹಾಯಕ ಆಯುಕ್ತೆ ಹಾಗೂ ಪುರಸಭೆ ಆಡಳಿತಾಧಿಕಾರಿ ರಶ್ಮೀ ಎಸ್.ಆರ್. ಅವರಿಗೆ ಮನವಿ ಸಲ್ಲಿಸಿದವು.
ಜನವಿರೋಧಿಯಾದ ಈ ನಿರ್ಣಯವು ಸಾಮಾನ್ಯ ವರ್ಗದ ವಾಹನ ಸವಾರರ ವಿರುದ್ಧವಾಗಿದೆ. ಕುಂದಾಪುರಕ್ಕೆ ಪ್ರತಿ ದಿನ ಸಾವಿರಾರು ಜನ ದೈನಂದಿನ ವ್ಯಾಪಾರ, ಉದ್ಯೋಗ, ಅಗತ್ಯ ಕೆಲಸಕ್ಕಾಗಿ ಬರುತ್ತಾರೆ. ರಸ್ತೆ ಬದಿ ವಾಹನ ನಿಲ್ಲಿಸಲು ಸಹ ಶುಲ್ಕ ವಿಧಿಸುವುದರಿಂದ ಜನರಿಗೆ, ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಎಲ್ಲರಿಗೂ ತೊಂದರೆಯಾಗಲಿದೆ. ನಗರದೊಳಗಿನ ವ್ಯಾಪಾರಗಳ ಮೇಲೂ ಗಂಭೀರ ಪರಿಣಾಮ ಬೀಳಲಿದೆ. ಶುಲ್ಕ ವಸೂಲಿಯನ್ನು ಖಾಸಗಿಯವರಿಗೆ ನೀಡುವುದರಿಂದ ಜನರೊಂದಿಗೆ ಅನಗತ್ಯ ಸಂಘರ್ಷಕ್ಕೆ ಕಾರಣ ಆಗಬಹುದು. ಆದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ, ನಗರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪುರಸಭೆ ತೆಗೆದುಕೊಂಡಿರುವ ನಿರ್ಣಯವನ್ನು ಕೂಡಲೇ ಮರುಪರಿಶೀಲಿಸಿ, ಹಿಂಪಡೆಯವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿವಿಧ ಸಂಘಟನೆಗಳ ಮುಖಂಡರಾದ ರಾಮಕೃಷ್ಣ ಹೇರ್ಳೆ, ವಿಕಾಸ್ ಹೆಗ್ಡೆ, ಚಂದ್ರಶೇಖರ್ ಶೆಟ್ಟಿ, ರೋಶನ್ ಶೆಟ್ಟಿ, ಕೇಶವ್ ಭಟ್, ರಾಮಚಂದ್ರ ನಾವಡ, ಜಾಯ್ ಕರ್ವಾಲೋ, ಉದಯ ಕುಮಾರ್ ತಲ್ಲೂರು, ವಿ. ಗಣೇಶ್, ಎಚ್.ನರಸಿಂಹ, ವಿ.ನರಸಿಂಹ ಮೊದಲಾದವರು ಉಪಸ್ಥಿತರಿದ್ದರು.
‘2010ರಲ್ಲಿ ಡಿಸಿಯಿಂದ ಗೆಜೆಟ್ ನೋಟಿಫಿಕೇಶನ್ ಆಗಿದೆ. ಆದರೆ ಪ್ರಕಟನೆ ಕೊಟ್ಟ ತತಕ್ಷಣ ಜಾರಿಯಾಗಿಲ್ಲ. ಆಕ್ಷೇಪಣೆಗೆ ಈಗಲೂ ಅವಕಾಶವಿದೆ. ಜನರಿಗೆ, ವ್ಯಾಪಾರಸ್ಥರಿಗೆ ಆಗುವ ತೊಂದರೆಗಳ ಬಗ್ಗೆ ಅವಲೋಕನ ಅಗತ್ಯ. ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆಯಿದೆ. ಅದಕ್ಕಾಗಿ ಹೀಗೆ ಮಾಡಿರಬಹುದು. ಶೀಘ್ರವೇ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಳ್ಳೆಯ ತೀರ್ಮಾನವನ್ನು ಕೈಗೊಳ್ಳಲಾಗುವುದು’
-ರಶ್ಮೀ ಎಸ್.ಆರ್., ಸಹಾಯಕ ಆಯುಕ್ತೆ, ಕುಂದಾಪುರ







