ಪತ್ರಕರ್ತ ಹೆಸರಿನಲ್ಲಿನ ಬ್ಲಾಕ್‌ಮೇಲ್ ದಂಧೆಗೆ ಕಡಿವಾಣ ಅಗತ್ಯ: ಶಿವಾನಂದ ತಗಡೂರು

ಉಡುಪಿ, ಮಾ.7: ಇಂದು ಪತ್ರಕರ್ತ ಎಂಬ ಲೇಬಲ್ ಇಟ್ಟುಕೊಂಡು ಕೆಲವರು ಬ್ಲಾಕ್‌ಮೇಲ್ ದಂಧೆ, ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುತ್ತಿರುವುದು ಹೆಚ್ಚು ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕಾರ್ಯ ನಾವು ಮಾಡಬೇಕು. ಇಲ್ಲದಿದ್ದರೆ ಪತ್ರಕರ್ತರಿಗೆ ಈ ಸಮಾಜದಲ್ಲಿ ಗೌರವ ಸಿಗಲು ಸಾಧ್ಯವಿಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿ, ಕಾರ್ಕಳ, ಕುಂದಾಪುರ, ಬೈಂದೂರು, ಕಾಪು, ಬ್ರಹ್ಮಾವರ, ಹೆಬ್ರಿ ತಾಲೂಕು ಘಟಕಗಳ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪತ್ರಕರ್ತ ಮಾಡುವ ಸುದ್ದಿಯಿಂದ ಸಮಾಜಕ್ಕೆ ಪ್ರಯೋಜನವಾದರೆ ಈ ವೃತ್ತಿ ಸಾರ್ಥಕ ಎನಿಸುತ್ತದೆ. ಇಂದಿನ ಮಾಧ್ಯಮಗಳು ಸಮಾಜದಲ್ಲಿ ಅಂಡುಕೊಂಡುಗಳನ್ನು ತಿದ್ದುವ ಸುದ್ದಿಗಳಿಗಿಂತ ಸ್ಟೇಟ್‌ಮೆಂಟ್ ಓರಿಯೆಂಟೆಡ್ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಜನಪರ ಸುದ್ದಿಯತ್ತ ಗಮನ ಹರಿಸಬೇಕು. ವರದಿ ಮಾಡುವಾಗ ಸಾಮಾಜಿಕ ಪ್ರಜ್ಞೆ ಕೂಡ ಪತ್ರಕರ್ತರಿಗೆ ಮುಖ್ಯವಾಗಿದೆ ಎಂದರು.
ಸಮಾಜವು ಪತ್ರಕರ್ತರನ್ನು ಬಹಳ ಜವಾಬ್ದಾರಿಯುತ ಸ್ಥಾನದಲ್ಲಿ ಇಟ್ಟಿದೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಪತ್ರಕರ್ತ ಬಹಳ ಎಚ್ಚರಿಕೆ ಹಾಗೂ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು. ಪತ್ರಕರ್ತನ ಬರವಣಿಗೆಯಷ್ಟೇ ಅಲ್ಲ, ಅವರ ನಡೆನುಡಿ ಕೂಡ ಮುಖ್ಯವಾಗಿದೆ. ಪತ್ರಕರ್ತರ ಈ ವೃತ್ತಿಯನ್ನು ಒಪ್ಪಿಕೊಂಡ ನಂತರ ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳುವುದು ಮತ್ತು ವೃತ್ತಿ ಮನೋಧರ್ಮ ರೂಡಿಸಿಕೊಳ್ಳುವುದು ಮುಖ್ಯ. ಆ ನಿಟ್ಟಿನಲ್ಲಿ ಸಂಘ ಕೂಡ ಕಾರ್ಯನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ಸಂಘದ ನೂತನ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘದ ಉಸ್ತುವಾರಿ, ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಮಾತನಾಡಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್, ಶಿರೂರು, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಸಹಿತ ಜಿಲ್ಲೆ ಹಾಗೂ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳನ್ನು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಜಿತ್ ಆರಾಡಿ ವಾಚಿಸಿದರು. ರಾಮಾಂಜಿ ನಮ್ಮಭೂಮಿ ಆಶಯ ಗೀತೆ ಹಾಡಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಚೇತನ್ ಮಟಪಾಡಿ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಪತ್ರಕರ್ತರ ‘ಸನ್ಮತಿ’ ಮಾಸಿಕ ಪತ್ರಿಕೆ ಬಿಡುಗಡೆ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಹಾಗೂ ಮಾಧ್ಯಮಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘದ ವತಿಯಿಂದ ಆರಂಭಿಸಲಾದ ‘ಸನ್ಮತಿ’ ಮಾಸಿಕ ಪತ್ರಿಕೆಯನ್ನು ರಾಜ್ಯಾಧ್ಯಕ್ಷ ಶಿವಾನಂದ ತಡಗೂರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಹಾಗೂ ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಆಯ್ಕೆಯಾದ ಜನಾರ್ದನ ಕೊಡವೂರು, ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಯಶೋಧಾ ಕೇಶವ್ ಅವರನ್ನು ಸನ್ಮಾನಿಸಲಾಯಿತು.







