ಪುರಾತತ್ವ ನೆಲೆ, ಇತಿಹಾಸದ ಬಗ್ಗೆ ಅಧ್ಯಯನ ಅಗತ್ಯ: ಪ್ರೊ.ಕೋರಿಸೆಟ್ಟರ್

ಉಡುಪಿ, ಮಾ.8: ಕರ್ನಾಟಕದ ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಪಾರವಾದ ಪುರಾತತ್ವ ಹಾಗೂ ಐತಿಹಾಸಿಕ ನೆಲೆಗಳಿವೆ. ದಕ್ಷಿಣ ಭಾರತದ ಹಲವಾರು ಪ್ರದೇಶಗಳಲ್ಲಿರುವ ಅಂತಹ ನೆಲೆಗಳ ಕುರಿತು ಮಾಹಿತಿಯೇ ಇಲ್ಲ. ದೇಶದ ಕರಾವಳಿ ಭಾಗವಾದ ಕೇರಳ ಹಾಗೂ ಕೊಂಕಣದ ಇತಿಹಾಸ ಹೆಚ್ಚು ಶ್ರೀಮಂತವಾಗಿದೆ. ಇಂದಿನ ಯುವಪೀಳಿಗೆ ಪುರಾತತ್ವ ನೆಲೆ, ಅವುಗಳ ಇತಿಹಾಸ ಹಾಗೂ ಪಶ್ಚಿಮ ಘಟ್ಟಗಳ ವಿಶೇಷತೆ ಕುರಿತು ಅರಿತುಕೊಳ್ಳ ಬೇಕು. ಅದಕ್ಕಾಗಿ ಅಧ್ಯಯನ ಮಾಡಬೇಕು ಎಂದು ಭಾರತದ ಪುರಾತತ್ವ ವಿದ್ವಾಂಸ ಪ್ರೊ.ರವೀಂದ್ರ ಕೋರಿಸೆಟ್ಟರ್ ಹೇಳಿದ್ದಾರೆ.
ಉಡುಪಿ ಆದಿಮ ಕಲಾ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣ ದಲ್ಲಿ ಆಯೋಜಿಸಲಾದ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ’ಆದಿಮ ಕಲಾರತ್ನ’ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಸಂಸ್ಥೆಯ ವತಿಯಿಂದ ಮುದ್ರಿಸಿದ ’ಕರ್ನಾಟಕ ಕರಾವಳಿಯ ಆದಿಮ ಕಲೆ’ ಪುಸ್ತಕವನ್ನು ಮಣಿಪಾಲ ಮಾಹೆಯ ಗಾಂಧೀಯನ್ ಸೆಂಟರ್‌ನ ನಿಕಟಪೂರ್ವ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಬಿಡುಗಡೆ ಮಾಡಿದರು. ಅಲ್ಲದೆ, ಟ್ರಸ್ಟ್‌ನ ’ಆದಿಮಕಲಾ ಪ್ರಕಾಶನ’ ಉದ್ಘಾಟಿಸಿ ಶುಭಹಾರೈಸಿದರು. ಪುಸ್ತಕದ ಕುರಿತು ಡಾ.ಆರ್.ಮೋಹನ್ ಮಾತನಾಡಿದರು.
ಪ್ರಥಮ ವಾರ್ಷಿಕೋತ್ಸವದ ನಿಮಿತ್ತ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ’ಮರೆಯ ಲಾಗದ ಕರ್ನಾಟಕದ ಇತಿಹಾಸಕಾರರು’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಡಾ.ರುರಾಮ್ ಶೆಟ್ಟಿ ಗುಳ್ಳಾಡಿ ಬಹುಮಾನ ವಿತರಿಸಿದರು.
ಆದಿಮ ಕಲಾ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಡಾ.ರಾಜೇಂದ್ರ ಕರ್ಕೇರ ಗೋವಾ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಉಪಾಧ್ಯಕ್ಷ ಯುಸೂಫ್ ಹೈದರ್ ಉಪಸ್ಥಿತರಿದ್ದರು. ಟ್ರಸ್ಟ್‌ನ ಕಾರ್ಯನಿರ್ವಾಹಕ ಸದಸ್ಯ ಪ್ರೊ.ಟಿ.ಮುರುಗೇಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೇಯಸ್ ಕೋಲ್ಪೆ ಕಾರ್ಯಕ್ರಮ ನಿರ್ವಹಿಸಿದರು.







