ಡುಂಡಿರಾಜರ ಹೊಸ ಕವಿತೆಗಳು ಕಾರ್ಯಕ್ರಮ

ಉಡುಪಿ, ಮಾ.8: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಹನಿ ಕವಿತೆಗಳ ರಾಜ ಡುಂಡಿರಾಜರ ಹೊಸ ಕವಿತೆಗಳು ಕಾರ್ಯಕ್ರಮ ಉಡುಪಿಯ ಬುಡ್ನಾರಿನ ಅಂಶು ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಕವಿ ಡುಂಡಿ ರಾಜರು ಉಡುಪಿಯ ಸಾಹಿತ್ಯಾಸಕ್ತರರಿಗೆ ತಮ್ಮ ಹೊಸ ಹನಿಗವನಗಳು, ಹೈಕುಗಳ ಮೂಲಕ ಮನಸ್ಸನ್ನು ಮುಧಗೊಳಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಜಿ ಕುರ್ಯ ತಮ್ಮ ಸ್ವರಚಿತ ಹನಿಗವನಗಳನ್ನು ಪ್ರಸ್ತುತ ಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕಸಾಪ ಉಡುಪಿ ತಾಲೂಕಿನ ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್, ಕಸಾಪದ ನಾರಾಯಣ ಮಡಿ ಭುವನ ಪ್ರಸಾದ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಮಾಜಿ ಸದಸ್ಯ ಗಿರೀಶ್ ಅಂಚನ್ ಅವರನ್ನು ಗೌರವಿಸಲಾಯಿತು. ಸಂಧ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಜನಾರ್ದನ್ ವಂದಿಸಿದರು.







