ಮಹಿಳೆಯರು ಸ್ವಾವಲಂಬಿಗಳಾದಾಗ ದೇಶದ ಅಭಿವೃದ್ಧಿ:ಎಂ.ಎ.ಗಫೂರ್

ಉಡುಪಿ, ಮಾ.9:ತಮ್ಮ ಬದುಕಿನಲ್ಲಿ ಮಹಿಳೆಯರು ತಾಯಿ, ಸಹೋದರಿ, ಹೆಂಡತಿ, ಮಗಳು ಹೀಗೆ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಕುಟುಂಬವನ್ನು ಮುನ್ನಡೆಸುತ್ತಾರೆ. ಕುಟುಂಬದ ಜೊತೆ ಸಮಾಜವನ್ನು ಮುನ್ನಡೆ ಸುವ ಹೊಣೆಗಾರಿಕೆಯೂ ಮಹಿಳೆಯರ ಮೇಲಿದೆ. ಮಹಿಳೆಯರು ಸ್ವಾವಲಂಬಿಗಳಾದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಹಾಗೂ ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ಪರ್ಯಾಯ ಶಿರೂರು ಮಠ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಹಿಳೆಯರು ಸಮಾಜದ ಆಸ್ತಿ. ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಿದಾಗಇಡೀ ಕುಟುಂಬ ಏಳಿಗೆ ಕಾಣುತ್ತದೆ. ಮಹಿಳೆಯರ ಸಬಲೀಕರಣ ಕ್ಕಾಗಿ ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿ ಸಿದೆ. ಮಹಿಳೆಯರು ನಾಯಕರಾದಾಗ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಆಡಳಿತ ನಡೆಸುತ್ತಾರೆ ಮಹಿಳೆ ಯರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ದೇಶದಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರಕಾರವಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಶೇ. 33 ಮಹಿಳಾ ಪ್ರಾತಿನಿಧ್ಯ ನೀಡುವ ಕಾರ್ಯ ನಡೆಯಿತು. ಇದು ಮಹಿಳೆಯರ ಸಬಲೀಕರಣಕ್ಕಾಗಿ ತೆಗೆದುಕೊಂಡ ದಿಟ್ಟ ನಿರ್ಧಾರವಾಗಿತ್ತು ಎಂದು ಗಫೂರ್ ಹೇಳಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳು ಹಾಗೂ ನ್ಯಾಯಕ್ಕಾಗಿ ಹೋರಾಡಬೇಕು. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಸರಕಾರದಲ್ಲಿ ಸರಿಯಾದ ಜನಪ್ರತಿನಿಧಿಗಳು ಇರಬೇಕು. ಸರಕಾರದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಶೇ.33ರಷ್ಟು ಮೀಸಲಾತಿ ನೀಡುವ ಕಾಯ್ದೆ ತರಲಾಗಿದ್ದು, ರಾಷ್ಟ್ರೀಯ ಜನಗಣತಿ ನಡೆದ ಬಳಿಕ ಇದು ಕಾನೂನಾಗಿ ಜಾರಿಯಾಗಲಿದೆ. ಮಹಿಳೆಯರಿಗೆ ಮೀಸಲಾತಿ ದೊರೆತಾಗ ಅವರ ಧ್ವನಿ ಪಂಚಾಯತ್‌ನಿಂದ ಸಂಸತ್ ಸದನದವರೆಗೆ ಪ್ರತಿಧ್ವನಿಸುವುದು ಎಂದರು.
ಇದೇ ಸಂದರ್ಭದಲ್ಲಿ ಮಹಿಳೆಯರು ಉತ್ಪಾದಿಸಿದ ವಸ್ತುಗಳ ಮಳಿಗೆಗಳನ್ನು ಅನಾವರಣಗೊಳಿಸಲಾಯಿತು. ಅತ್ಯುತ್ತಮ ಸೇವೆಗಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
‘ಮಗಳನ್ನು ಉಳಿಸಿ, ಮಗಳನ್ನು ಓದಿಸಿ’ ಸಹಿ ಸಂಗ್ರಹಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ರಕ್ಷಣಾಧಿಕಾರಿ ನಾಗರತ್ನ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶೋಭಾ ಕಲ್ಕೂರ, ಹಿರಿಯರಾದ ಸರಳ ಕಾಂಚನ್, ಶ್ಯಾಮಲಾ ಸಿ.ಕೆ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.
ದಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅನುರಾಧಾ ಹಾದಿಮನಿ ಸ್ವಾಗತಿಸಿ, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ವಸಂತಿ ರಾವ್ ಕೊರಡ್ಕಲ್ ವಂದಿಸಿದರು. ಸಂಗೀತ ಕಾರ್ಯಕ್ರಮ ನಿರೂಪಿಸಿದರು.







