ಮುಳುಗು ತಜ್ಞ ಈಶ್ವರ್ ಮಲ್ಪೆಗೆ ನೀರಿನಡಿಯ ಸಂವಹನ ಸಾಧನ ವಿತರಣೆ

ಮಲ್ಪೆ, ಮಾ.9: ಸಮಾಜದಲ್ಲಿ ಕಷ್ಟದಲ್ಲಿರುವ ವ್ಯಕ್ತಿಗಳ ನೋವಿಗೆ ಧ್ವನಿಯಾದವರ ಕಷ್ಟಕ್ಕೆ ಸ್ಪಂದನೆ ತೋರುವುದು ಮಾನವೀಯತೆಯಾಗಿದೆ. ಅಂತಹ ಮಾನವೀಯ ಸೇವೆಯನ್ನು ದೇವರು ಕೂಡ ಮೆಚ್ಚುತ್ತಾರೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಹೇಳಿದ್ದಾರೆ.
ಮಂಗಳೂರಿನ ಮೈಕಲ್ ಡಿಸೋಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಕೊಡ ಲಾದ ನೀರಿನಡಿ ಮುಳುಗಿ ಜೀವರಕ್ಷಣೆ ಮಾಡುವಾಗ ಉಪಯೋಗಿಸುವ ಸಂವಹನ ಸಾಧನವನ್ನು ಚರ್ಚಿನ ಆವರಣದಲ್ಲಿ ರವಿವಾರ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡುತಿದ್ದರು.
ಈಶ್ವರ್ ಮಲ್ಪೆ ರಾಜ್ಯದ ವಿವಿಧ ಭಾಗಗಳಲ್ಲಿ ನೀರಿನಲ್ಲಿ ಮುಳುಗಿದವರ ರಕ್ಷಣೆ ಕಾರ್ಯದ ಮೂಲಕ ಸಮಾಜದ ನೋವಿನಲ್ಲಿರುವವರ ಕಣ್ಣೀರು ಒರೆಸುವ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ಇಂತಹ ಕಾರ್ಯಕ್ಕೆ ಸೂಕ್ತ ಆಧುನಿಕ ಸಾಧನಗಳಿಲ್ಲದೆ ಕೆಲವೊಮ್ಮೆ ಅವರ ವೈಯುಕ್ತಿಕ ಜೀವಕ್ಕೂ ಅಪಾಯ ಉಂಟಾಗಿದ್ದು ಅವರ ಸೇವೆಯನ್ನು ಗಮನಿಸಿದ ಮೈಕಲ್ ಡಿಸೋಜ ನೀರಿನಡಿಯಲ್ಲಿ ಇದ್ದಾಗ ಮೇಲೆ ಇರುವವರ ಜೊತೆಗೆ ಸಂವಹನ ಸಾಧಿಸುವ ಸಾಧನವನ್ನು ನೀಡಿದ್ದಾರೆ. ಈ ಮೂಲಕ ಅವರು ಇನ್ನಷ್ಟು ಜೀವಗಳನ್ನು ರಕ್ಷಿಸುವಂತಾಗಲಿ. ಅವರು ವಾಸಿಸುವ ಮನೆ ಹಳೆಯದಾಗಿದ್ದು ಹೊಸ ಮನೆ ನಿರ್ಮಾಣಕ್ಕೂ ಕೂಡ ಮೈಕಲ್ ಡಿಸೋಜ ಮುಂದಿನ ದಿನಗಳಲ್ಲಿ ಸಹಾಯ ಹಸ್ತವನ್ನು ನೀಡಲಿದ್ದಾರೆ ಎಂದು ಅವರು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಈಶ್ವರ್ ಮಲ್ಪೆ, ನೀರಿಗೆ ಬಿದ್ದವರ ದೇಹ ತೆಗೆಯಲು 30ರಿಂದ 40 ಅಡಿ ಆಳಕ್ಕೆ ತೆರಳಿ ದಾಗ ಮೇಲೆ ಇದ್ದವರ ಜೊತೆಗೆ ಸಂಪರ್ಕ ಮಾಡಲು ಹಗ್ಗದ ವ್ಯವಸ್ಥೆ ಮೂಲಕ ಮಾಡಲಾಗುತ್ತದೆ. ಈ ವೇಳೆ ನನ್ನ ಜೀವಕ್ಕೆ ಅಪಾಯವಾದ ಹಲವಾರು ನಿದರ್ಶನಗಳಿವೆ. ನೀರಿಗೆ ಬಿದ್ದ ವ್ಯಕ್ತಿಗಳ ಜಾತಿ ಧರ್ಮ ನೋಡದೆ ಮೊದಲು ಅವರನ್ನು ಬದುಕಿಸುವ ಪ್ರಯತ್ನ ನಮ್ಮದು. ಇಂತಹ ಕೆಲಸ ಮಾಡುವಾಗ ಜನರ ಪ್ರಾರ್ಥನೆ ಮತ್ತು ಹಾರೈಕೆಯಿಂದ ಸುರಕ್ಷಿತವಾಗಿ ನಾವು ಮತ್ತೆ ನೀರಿನಿಂದ ಮೇಲೆ ಬರಲು ಸಾಧ್ಯವಾಗಿದೆ ಎಂದರು.
ಟ್ರಸ್ಟಿನ ಸದಸ್ಯರಾದ ಒಸ್ವಲ್ಡ್ ರೊಡ್ರಿಗಸ್, ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ಆಲ್ವಿನ್ ಸಿಕ್ವೇರಾ, ಸ್ಥಳೀಯ ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಶ್ಮಾ, ಚಾರಿಟೇಬಲ್ ಟ್ರಸ್ಟಿನ ಸದಸ್ಯ ಸ್ವೀವನ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್, 20 ಆಯೋಗಗಳ ಸಂಚಾಲಕಿ ಶಾಂತಿ ಫೆರ್ನಾಂಡಿಸ್, ಚರ್ಚಿನ ಸ್ತ್ರೀ ಸಂಘಟನೆ ಅಧ್ಯಕ್ಷ ಪ್ರೀಯಾ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.







