ಗಲ್ಫ್‌ನಲ್ಲಿರುವ ಕನ್ನಡಿಗರ ರಕ್ಷಣೆ; ವಿದೇಶಾಂಗ ಸಚಿವ ಜೈಶಂಕರ್‌ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ

ಉಡುಪಿ, ಮಾ.9: ಬಹರೈನ್, ಕತಾರ್, ಕುವೈಟ್, ದುಬೈ ಮುಂತಾದ ಕೊಲ್ಲಿ ರಾಷ್ಟ್ರಗಳಲ್ಲಿರುವ ಕನ್ನಡಿಗರ ಮನವಿಯಂತೆ, ಯುದ್ಧಪೀಡಿತ ಪ್ರದೇಶಗಳ ಭಾರತೀಯರನ್ನು ರಕ್ಷಿಸುವ ಕುರಿತಂತೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಹೊಸದಿಲ್ಲಿಯ ಪಾರ್ಲಿಮೆಂಟ್ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ಮನವಿ ಸಲ್ಲಿಸಿದರು.
ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಯ ಬಗ್ಗೆ ವಿವರಿಸಿದ ಸಚಿವ ಜೈಶಂಕರ್, ಆ ಪ್ರದೇಶದ ವಿಮಾನ ನಿಲ್ದಾಣದ ಮೇಲೆ ದಾಳಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಪ್ರಯತ್ನ ಮಾಡುತ್ತಿದೆ.ಯಾವುದೇ ಆತಂಕ ಬೇಡ ಎಂದು ಭರವಸೆ ನೀಡಿದರು.
ಈ ಮಧ್ಯೆ ಲೋಕಸಭಾ ಸದನದಲ್ಲಿ ಸರಕಾರದ ಪರವಾಗಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ವಿದೇಶಾಂಗ ಸಚಿವರು, ಸೌದಿ ಅರೇಬಿಯಾ, ಓಮನ್, ಜೋರ್ಡನ್, ಬಹರೈನ್, ಕುವೈಟ್, ಕತಾರ್ ಸಹಿತ ಜಗತ್ತಿನಾದ್ಯಂತ ಇರುವ ಭಾರತೀಯರನ್ನು ರಕ್ಷಿಸುವ ಹೊಣೆ ಕೇಂದ್ರ ಸರಕಾರ ನಿರ್ವಹಿಸುತ್ತಿದ್ದು, ಈಗಾಗಲೇ 49 ವಿಮಾನಗಳು ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬಂದಿವೆ ಎಂದರು.
ವಿವಿಧ ಸೌಲಭ್ಯಗಳ ಮೂಲಕ ಈಗಾಗಲೇ 67 ಸಾವಿರ ಮಂದಿ ಭಾರತಕ್ಕೆ ಮರಳಿ ಬಂದಿದ್ದಾರೆ. ಇರಾನ್ ಸಂಪರ್ಕ ಸಿಗದಷ್ಟು ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಯುದ್ಧ ತಪ್ಪಿಸಲು ಮಾತುಕತೆ ಒಂದೇ ಪರಿಹಾರ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯುದ್ಧದಲ್ಲಿ ತೊಡಗಿಕೊಂಡ ದೇಶಗಳಿಗೆ ಮನವರಿಕೆ ಮಾಡುತ್ತಿದ್ದಾರೆ. ಒಟ್ಟು ಒಂದು ಕೋಟಿ ಭಾರತೀಯ ಪೌರರು ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ ಎಂದರು.
ಯುದ್ಧದ ಮೂಲಕ ಇಂಧನದ ಸಮಸ್ಯೆ ಸೃಷ್ಟಿಯಾಗಿದೆ. ಭಾರತ ಜಗತ್ತಿನಲ್ಲಿ ಶಾಂತಿ ನೆಲೆಸಲು ಸರ್ವ ಯತ್ನ ಮಾಡುತ್ತಿದೆ. ವಿದೇಶದಲ್ಲಿರುವ ದೇಶದ ಜನರ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿಯಿಂದ ಕೇಂದ್ರ ಕೆಲಸ ಮಾಡುತ್ತಿದೆ. ಸಂಕಷ್ಟದಲ್ಲಿರುವವರನ್ನು ಭಾರತಕ್ಕೆ ಕರೆ ತರುತ್ತೇವೆ ಎಂದು ಸದನದಲ್ಲಿ ಕೇಂದ್ರ ಸರಕಾರದ ಪರವಾಗಿ ಸಚಿವ ಜೈಶಂಕರ್ ಹೇಳಿಕೆ ನೀಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







