ಕಳ್ತೂರು ಸಂತೆಕಟ್ಟೆ ಹಿಂದೂ ರುದ್ರಭೂಮಿ ಉದ್ಘಾಟನೆ

ಹೆಬ್ರಿ, ಮಾ.9: 38ನೇ ಕಳ್ತೂರು ಗ್ರಾಮ ಪಂಚಾಯತ್ ಮತ್ತು ಸ್ಮಶಾನ ಅಭಿವೃದ್ಧಿ ಸಮಿತಿಯ ವತಿಯಿಂದ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಆರ್ಬೆಟ್ಟು ದಿ.ವೆಂಕಟೇಶ ಕಾಮತ್ ಸಾರ್ವಜನಿಕ ಹಿಂದೂ ರುದ್ರಭೂಮಿ ರವಿವಾರ 38ನೇ ಕಳ್ತೂರಿನಲ್ಲಿ ಉದ್ಘಾಟನೆಗೊಂಡಿತು.
ಊರಿಗೊಂದು ಸುಸಜ್ಜಿತ ಸ್ಮಶಾನ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿದಂತೆ ಊರಿನ ಅಭಿವೃದ್ಧಿಗೂ ಎಲ್ಲರೂ ಕೈಜೋಡಿಸಿದರೆ ಊರಿನ ಸಮಗ್ರ ಅಭಿವೃದ್ಧಿ ಸಾಧ್ಯವಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.
ಸ್ಮಶಾನದಲ್ಲೂ ಮನಸ್ಸಿಗೆ ಶಾಂತಿ ದೊರೆಯಬೇಕು, ಅಷ್ಟು ಅಚ್ಚುಕಟ್ಟಾಗಿ ಕಳ್ತೂರಿನಲ್ಲಿ ಸಾರ್ವಜನಿಕ ರುದ್ರ ಭೂಮಿಯನ್ನು ನಿರ್ಮಿಸಲಾಗಿದೆ. ದಾನಿಗಳ ನೆರವಿನಿಂದ ಸಕಲ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಮಾಡಿರುವುದು ಪುಣ್ಯದ ಕೆಲಸ ಎಂದು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.
ತನ್ನ ತಂದೆಯ ಸ್ಮರಣಾರ್ಥ ರುದ್ರಭೂಮಿ ನಿರ್ಮಿಸಿ ಕೊಟ್ಟ ಉದ್ಯಮಿ ಎ. ಮಾಧವ ಕಾಮತ್ ಮಾತನಾಡಿ ರಾಜಕೀಯ ಬದಿಗೊತ್ತಿ ಎಲ್ಲರೂ ಸೇರಿ ಕೆಲಸ ಮಾಡಿದಾಗ ಊರಿನ ಅಭಿವೃದ್ಧಿ ಸಾದ್ಯವಾಗುತ್ತದೆ. ಸ್ಮಶಾನ ನಿರ್ಮಾಣದ ಮೂಲಕ ನಮ್ಮೂರಿನ ಬಹುಕಾಲದ ಕೊರತೆ ಈಡೇರಿದೆ ಎಂದರು.
ಸ್ಮಶಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಎ.ಸಿ, ಸಹಕಾರ ನೀಡಿದ ಹಲವರನ್ನು ಗೌರವಿಸಲಾಯಿತು. 38ನೇ ಕಳ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ರುದ್ರಭೂಮಿಯ ಕೀಯನ್ನು ಹಸ್ತಾಂತರಿಸಲಾಯಿತು.
ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿಯ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೈರ್ಮಾಡಿ ಅಶೋಕ ಕುಮಾರ್ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಹೆಬ್ರಿ ತಾಲೂಕಿನ ಯೋಜನಾಧಿಕಾರಿ ಲೀಲಾವತಿ, ದಾನಿಗಳಾದ ಉದ್ಯಮಿ ಎ. ಮಾಧವ ಕಾಮತ್, ನಾಗರಾಜ ಕಾಮತ್, ಮಹೇಶ ಶೆಟ್ಟಿ ಬ್ರಹ್ಮಾವರ, ನರಸಿಂಹ ಗಡಿಯಾರ್ ಭಾಗವಹಿಸಿದ್ದರು.
ಕಂಬಳಗದ್ದೆ ಮನೆ ಚಂದ್ರಶೇಖರ ಶೆಟ್ಟಿ, ಜಯರಾಮ ನಾಯ್ಕ್, ಶಿವಪುರ ಶ್ರೀನಿವಾಸ ಹೆಬ್ಬಾರ್, ಸುಧಾಕರ ನಾಯ್ಕ್, ಸ್ಮಶಾನ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಗಿರೀಶ ಕಾಮತ್, ರವಿ ಪೂಜಾರಿ ಸಂತೆಕಟ್ಟೆ, ಸ್ಮಶಾನ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ದಾನಿಗಳು ಉಪಸ್ಥಿತರಿದ್ದರು.
ಗಿರೀಶ್ ಕಾಮತ್ ಸ್ವಾಗತಿಸಿ ಚಂದ್ರಶೇಖರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ದೀಕ್ಷಿತ್ ಶೆಟ್ಟಿ ಮತ್ತು ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.







