ಮಲ್ಪೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಸದರಿಂದ ವೀಕ್ಷಣೆ

ಉಡುಪಿ, ಮಾ.9: ಉಡುಪಿಯ ಕರಾವಳಿ ಜಂಕ್ಷನ್‌ನಿಂದ ಮಲ್ಪೆ ಬಳಿಯ ಕಲ್ಮಾಡಿ ಸೇತುವೆವರೆಗಿನ ಇಕ್ಕೆಲಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿಯನ್ನು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ವೀಕ್ಷಣೆ ನಡೆಸಿದರು.
ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ ಭೂ ಮಾಲಕರಿಗೆ ಪರಿಹಾರ ನೀಡದಿರುವುದು, ಭಾಗಶಃ ಸ್ವಾಧೀನವಾದ ಭೂಮಿಗಳಿಗೆ ಪೋಡಿ ರಚನೆಯಲ್ಲಾದ ವಿಳಂಬದಿಂದ ಹಣ ಪಾವತಿಯ ಸಮಸ್ಯೆ, ವಿದ್ಯುತ್ ಕಂಬಗಳ ಸ್ಥಳಾಂತರದ ಸಮಸ್ಯೆಯಿಂದ ಮರಗಳ ತೆರವಿಗೆ ಅಡಚಣೆ ಮುಂತಾದ ತೊಂದರೆಗಳನ್ನು ಸಂಸದರು ಖುದ್ಧಾಗಿ ಪರಿಶೀಲಿಸಿದರು.
ಭೂಮಾಲಕರ ಖಾತಾ ಸಮಸ್ಯೆಗಳಿದ್ದಲ್ಲಿ ಅಥವಾ ವ್ಯಾಜ್ಯ, ತಕರಾರು ಗಳಿದ್ದಲ್ಲಿ ಪರಿಹಾರದ ಹಣವನ್ನು ಅವರ ಹೆಸರಲ್ಲಿ ಠೇವಣಿ ಇರಿಸುವಂತೆ ಸೂಚಿಸಿದರಲ್ಲದೇ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮರಗಳ ತೆರವಿಗೆ ಅನುಮತಿ ನೀಡುವಂತೆ ಸ್ಥಳದಲ್ಲೇ ಸೂಚನೆ ನೀಡಿದರು.
ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಕಾಯುತ್ತಿದ್ದೇವೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ಎಂದು ಸ್ಥಳೀಯರು ಒತ್ತಾಯಿಸಿ ದಾಗ, ಶಾಲಾ ಮಕ್ಕಳ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸ್ಥಗಿತಗೊಳಿಸಿ ಕಂಬಗಳ ತೆರವಿಗೆ ಅವಕಾಶ ಕಲ್ಪಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಮಾರು 2 ಕಿ.ಮೀ ರಸ್ತೆಯಲ್ಲಿ ಸಂಚರಿಸಿದ ಸಂಸದ ಕೋಟ, ಸಮರ್ಪಕ ದಾಖಲೆ ನೀಡಿದವರಿಗೆ ಒಂದು ವಾರದಲ್ಲಿ ಹಣ ಪಾವತಿ ಮಾಡುವಂತೆ, 3ಡಿ ಅಪೂರ್ಣವಾದವರಿಗೆ 15 ದಿನಗಳ ಒಳಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ, ಯಾವುದೇ ಕಾರಣಕ್ಕೂ ವಿಳಂಬ ವಿಲ್ಲದೆ ರಸ್ತೆ ಕೆಲಸ ಮಳೆಗಾಲದೊಳಗೆ ಪೂರ್ಣಗೊಳಿಸುವಂತೆ ತಾಕಿತು ಮಾಡಿದರು.
ಸಂಸದರೊಂದಿಗೆ ಕುಂದಾಪುರದ ಸಹಾಯಕ ಕಮಿಷನರ್ ರಶ್ಮಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸುಧಾಕರ್ ನಾಯಕ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಲೋಕೇಶ್ ಶಶಿಧರ್ ನವೀನ್, ಗ್ರಾಮ ಆಡಳಿತ ಅಧಿಕಾರಿ ಕಾರ್ತಿಕೇಯ, ಮಾಜಿ ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಹರೀಶ್ ರಾಂ, ಮಲ್ಪೆ ಠಾಣಾಧಿಕಾರಿ ಈರಣ್ಣ ಶಿರಗುಪ್ಪಿ ಉಪಸ್ಥಿತರಿದ್ದರು.







