ಮಹಿಳಾ ಪರ ವಾದಕ್ಕೆ ಭಾರತವೂ ತವರೂರು: ಬಿ.ಎಂ.ರೋಹಿಣಿ

ಉಡುಪಿ: ಮಹಿಳಾ ಪರ ಚಿಂತನೆಗಳು ಕೇವಲ ಪಾಶ್ಚಿಮಾತ್ಯ ರಾಷ್ಟ್ರಗಳ ಕಲ್ಪನೆಯಲ್ಲ. ಭಾರತೀಯ ತಾತ್ವಿಕ ಚಿಂತನೆಗಳಲ್ಲೂ ಮಹಿಳಾ ಪರ ಹೋರಾಟದ ಧ್ವನಿಗಳಿವೆ. ನಮ್ಮ ದೇಶದ ಪುರಾಣ, ಇತಿಹಾಸಗಳನ್ನು ವಾಸ್ತವಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದರೆ ಇದನ್ನು ಕಾಣಬಹುದು ಎಂದು ಚಿಂತಕಿ, ಲೇಖಕಿ ಬಿ.ಎಂ.ರೋಹಿಣಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡಿನ ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಮಹಿಳಾ ದಿನಾಚರಣಾ ಸಪ್ತಾಹ -2026ರ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಮಹಿಳಾ ಪರ ಚಿಂತನೆಯು ನಮ್ಮ ದೇಶದ ಸ್ತ್ರೀಯರಲ್ಲಿ ಆತ್ಮಾಭಿಮಾನವನ್ನು ಹೆಚ್ಚಿಸಿ ಸಂವಿಧಾನವು ಪ್ರತಿಪಾದಿ ಸುವ ಸಮಾನತೆಯನ್ನು ಪ್ರತಿಪಾದಿಸಲು ದಾರಿಯಾಗುತ್ತದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕ ಸಭಾಪತಿ ಬಸರೂರು ರಾಜೀವ ಶೆಟ್ಟಿ, ಒಂದೂವರೆ ಶತಮಾನದಿಂದಲೇ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮಹಿಳಾ ಸಮಾನತೆ ಯನ್ನು ಪ್ರತಿಪಾದಿಸಿದೆ. ಡಾ.ಶಿವರಾಮ ಕಾರಂತರ ದೃಷ್ಟಿಕೋನ ಇದಕ್ಕೆ ಪೂರಕವಾಗಿದೆ ಎಂದರು.
ಆಶಯ ಭಾಷಣ ಮಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಯುವಜನತೆಗೆ ಮಹಿಳಾ ಸಬಲೀಕರಣದ ಮಹತ್ವ ವನ್ನು ತಿಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಜನ್ ಕೆ.ಜಿ ಅಧ್ಯಕ್ಷತೆ ವಹಿಸಿದ್ದರು.
ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಬಿ.ಎಂ ರೋಹಿಣಿ ಅವರು ಕಾರಂತರ ಮಹಿಳಾ ಪರ ಚಿಂತನೆಗಳು ಮತ್ತು ಪ್ರೊ.ದಿವ್ಯರಾಣಿ ಪ್ರದೀಪ್ ಮಹಿಳಾ ಸಬಲೀಕರಣದ ಸವಾಲುಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಮಹಿಳಾ ಸಂಘದ ಸಂಚಾಲಕಿ ವಿದ್ಯಾ ಡಿ ಸನ್ಮಾನ ಪತ್ರ ವಾಚಿಸಿದರು.
ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕಾಧ್ಯಕ್ಷೆ ವಸಂತಿ ಶೆಟ್ಟಿ, ಬ್ರಹ್ಮಾವರ ರೆಡ್‌ಕ್ರಾಸ್ ಉಪಸಭಾಪತಿ ಡಾ.ಅಶೋಕ್‌ಕುಮಾರ್ ವೈ.ಜಿ ರೆಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ರಮಾದೇವಿ ಉಪಸ್ಥಿತರಿದ್ದರು.
ಉಪನ್ಯಾಸಕಿ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರೆ, ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ನಿಕೇತನ ವಂದಿಸಿದರು.







