ಸಿದ್ದಾಪುರದಲ್ಲಿ ಅಗ್ನಿಶಾಮಕ ಠಾಣೆಗೆ ಒಂದು ಎಕರೆ ಜಾಗ ಮಂಜೂರು; ಹಲವು ವರ್ಷಗಳ ಬೇಡಿಕೆಗೆ ಸ್ಪಂದನೆ: ಹತ್ತಾರು ಗ್ರಾಮಗಳಿಗೆ ಅನುಕೂಲ

ಕುಂದಾಪುರ, ಮಾ.10: ಗ್ರಾಮೀಣ ಪ್ರದೇಶದ ಹತ್ತಾರು ಗ್ರಾಮಗಳಿಗೆ ತುರ್ತು ಸಂದರ್ಭದಲ್ಲಿ ಸೇವೆ ದೊರಕಲು ಸಿದ್ದಾಪುರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಇದೀಗ ಈಡೇರಿದೆ. ಹೊಸ ಅಗ್ನಿಶಾಮಕ ದಳ ಠಾಣೆ ನಿರ್ಮಾಣಕ್ಕಾಗಿ ಸಿದ್ದಾಪುರದಲ್ಲಿ ಒಂದು ಎಕರೆ ಜಾಗ ಮಂಜೂರುಗೊಳಿಸಿ, ಉಡುಪಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಾದ ಕುಂದಾಪುರ, ಬೈಂದೂರು, ಹೆಬ್ರಿ ತಾಲೂಕಿನ ಗ್ರಾಮಾಂತರ ಪ್ರದೇಶ ದಲ್ಲಿ ಅಗ್ನಿ ಅವಘಡಗಳು ಹೆಚ್ಚುತ್ತಿವೆ. ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಿಸಬೇಕು. ಇದರಿಂದ ಈ ವ್ಯಾಪ್ತಿಯಲ್ಲಿ ಯಾವುದೇ ಆಕಸ್ಮಿಕ ಅವಘಡಗಳಾದಲ್ಲಿ ಶೀಘ್ರ ಸ್ಪಂದನೆ ಸಾಧ್ಯವಿದೆ ಎಂಬ ಕೂಗು ಹಲವು ವರ್ಷಗಳದ್ದಾಗಿತ್ತು. ಈ ಬಗ್ಗೆ ಮಂಗಳೂರು ವಲಯ ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿಗಳು 2024ರಲ್ಲಿ ಜಾಗಕ್ಕೆ ಬೇಡಿಕೆಯಿರಿಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಸ್ತುತ ಸಿದ್ದಾಪುರ ಗ್ರಾಮದ ಸರ್ವೇ ನಂಬರ್ 244 ರಲ್ಲಿ 1 ಎಕರೆ ಜಮೀನನ್ನು ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಹೆಸರಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 71 ರನ್ವಯ ಜಿಲ್ಲಾಧಿಕಾರಿಗಳು ಜಾಗ ಮಂಜೂರುಗೊಳಿಸಿದ್ದು ಶೀಘ್ರ ಠಾಣೆ ನಿರ್ಮಾಣ ವಾದಲ್ಲಿ ಈ ಭಾಗದ ಹತ್ತಾರು ಊರುಗಳಿಗೆ ಪ್ರಯೋಜನವಾಗಲಿದೆ.
ಸಿದ್ದಾಪುರದಲ್ಲಿ ಠಾಣೆಯಾಗುವುದರಿಂದ ಅವಿಭಜಿತ ಕುಂದಾಪುರ ತಾಲೂಕು ಹಾಗೂ ಹೆಬ್ರಿ ತಾಲೂಕಿನ ಹಲವು ಗ್ರಾಮಗಳಿಗೆ ಅನುಕೂಲ. ಸಿದ್ದಾಪುರ, ಹೊಸಂಗಡಿ, ಬಾಳೆಬರೆ ಘಾಟಿ ಪ್ರದೇಶ, ಹಾಲಾಡಿ, ಅಮಾಸೆಬೈಲು, ಬೆಳ್ವೆ, ಗೋಳಿಯಂಗಡಿ ಭಾಗದಲ್ಲಿ ಏನಾದರೂ ಅವಘಡ ಗಳಾದರೆ 25-30 ಕಿ.ಮೀ. ಅಂತರವಿರುವ ಕುಂದಾಪುರ (ಕೋಣಿ) ಅಥವಾ ದೂರದ ಕಾರ್ಕಳದಿಂದ ಬರಬೇಕು.
ಹಲವು ಗ್ರಾಮಗಳಿಗೆ ಅನುಕೂಲ: ಇಲ್ಲಿ ಅಗ್ನಿಶಾಮಕ ಠಾಣೆಯಾಗುವುದ ರಿಂದ ಬೆಳೆಯುತ್ತಿರುವ ಪೇಟೆಯಾದ ಸಿದ್ದಾಪುರ ಸಹಿತ ಹೊಸಂಗಡಿ, ಆಜ್ರಿ, ಹಳ್ಳಿಹೊಳೆ, ಕಮಲಶಿಲೆ, ಎಡಮೊಗ್ಗೆ, ಅಮಾಸೆಬೈಲು, ಗೋಳಿಯಂಗಡಿ, ಬೆಳ್ವೆ, ಉಳ್ಳೂರು 74, ಅಂಪಾರು, ಹಾಲಾಡಿ, ಶಂಕರನಾರಾಯಣ, ಮಡಾಮಕ್ಕಿ ಮೊದಲಾದ ಕಡೆಗಳಿಗೆ ಅನುಕೂಲ.
ಈ ಭಾಗದಲ್ಲಿ ಗೇರು ಬೀಜ, ಹಂಚಿನ ಕಾರ್ಖಾನೆಗಳು, ಅಡಿಕೆ ಗೋದಾಮುಗಳು, ಆಯಿಲ್ ಮಿಲ್ಗಳು ಕಾರ್ಯಾಚರಿ ಸುತ್ತಿದೆ. ಕೆಲ ತಿಂಗಳ ಹಿಂದೆ ಸಿದ್ದಾಪುರದಲ್ಲಿನ ಎಣ್ಣೆ ಮಿಲ್ನಲ್ಲಿ ಬೆಂಕಿ ಆಕಸ್ಮಿಕ ಘಟನೆ ಸಂಭವಿಸಿ ಅಪಾರ ನಷ್ಟವಾಗಿತ್ತು. ಬಳಿಕ ಗ್ರಾಮೀಣ ಭಾಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಬೇಕೆಂಬ ಕೂಗು ಮುನ್ನೆಲೆಗೆ ಬಂದಿತ್ತು. ಈ ಕುರಿತು ’ವಾರ್ತಾಭಾರತಿ’ ಕೂಡ ವಿಶೇಷ ವರದಿ ಪ್ರಕಟಿಸಿತ್ತು.
"ಪ್ರಸ್ತುತ ಅಗ್ನಿಶಾಮಕ ಠಾಣೆಗೆ ಕಾಯ್ದಿರಿಸಿದ ಜಾಗವು ಸಿದ್ದಾಪುರ ಪೇಟೆಯಿಂದ 350-400 ಮೀಟರ್ ಅಂತರದಲ್ಲಿದೆ. ಇಲ್ಲಿ ತುರ್ತುಸೇವೆಗಳ ಅಗ್ನಿಶಾಮಕ ಠಾಣೆಯಾವುದರಿಂದ ಹತ್ತಾರು ಗ್ರಾಮಗಳಿಗೆ ಅನುಕೂಲ ವಾಗುತ್ತದೆ. ಅಲ್ಲದೆ ಕರಾವಳಿ-ಮಲೆನಾಡು ಸಂಪರ್ಕಕೊಂಡಿಯಾದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬಾಳೆಬರೆ ಘಾಟಿ ಇನ್ನೂ ಅನೇಕ ಕಡೆಗಳಿಗೆ ಅಗತ್ಯ ಸಂದರ್ಭದಲ್ಲಿ ಸೇವೆ ಸಿಗಲಿದೆ. ಶೀಘ್ರ ಠಾಣೆ ನಿರ್ಮಾಣ ಕಾರ್ಯವೂ ಸಂಬಂಧಿತ ಇಲಾಖೆಯಿಂದ ನಡೆಯಬೇಕು".
- ಸುದರ್ಶನ್ ಶೆಟ್ಟಿ ಸಿದ್ದಾಪುರ, ಸಾಮಾಜಿಕ ಕಾರ್ಯಕರ್ತರು
ಸಿದ್ಧಾಪುರದಲ್ಲಿ ಅಗ್ನಿಶಾಮಕ ದಳ ಠಾಣೆಗೆ ಜಾಗ ಮಂಜೂರಾಗಿದ್ದು, ಸರಕಾರದಿಂದ ಹಣ ಬಿಡುಗಡೆಯಾಗಿ ಟೆಂಡರ್ ಆಗಬೇಕಾಗಿದೆ. ಅದೇ ರೀತಿ ಮಣಿಪಾಲ, ಬ್ರಹ್ಮಾವರ, ಶಿರ್ವ, ಪಡುಬಿದ್ರೆ, ಹೆಬ್ರಿಗಳಲ್ಲಿಯೂ ಹೊಸ ಠಾಣೆ ಸ್ಥಾಪನೆಯಾಗಲಿದೆ. ಕಟ್ಟಡ ಕಾಮಗಾರಿ ಮುಗಿದ ಬಳಿಕ ಮುಂದಿನ ಹಂತದಲ್ಲಿ ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ಒದಗಿಸ ಲಾಗುತ್ತದೆ. ಈ ಮೂಲಕ ಜಿಲ್ಲೆಯಲ್ಲಿ ಈಗ ಇರುವ ಐದು ಸೇರಿದಂತೆ ಒಟ್ಟು 11 ಅಗ್ನಿಶಾಮಕ ದಳ ಠಾಣೆಗಳನ್ನು ಸ್ಥಾಪನೆಯಾಗಲಿದೆ’
-ವಿನಾಯಕ ಕಲ್ಗುಟ್ಕರ್, ಅಧಿಕಾರಿಗಳು, ಅಗ್ನಿಶಾಮಕ ಮತ್ತು ತುರ್ತು1 ಸೇವೆ ಇಲಾಖೆಯ ಅಧಿಕಾರಿ, ಉಡುಪಿ







