ಅಮೆರಿಕಾ ಜಗತ್ತಿನ ಸಾಮ್ರಾಜ್ಯಶಾಹಿ ಕೊಲೆಗಡುಕ: ಸುರೇಶ್ ಕಲ್ಲಾಗರ್

ಉಡುಪಿ: ಜಗತ್ತಿನ ಎಲ್ಲಾ ದೇಶಗಳ ಮೇಲೆ ಹಿಡಿತ ಸಾಧಿಸಲು ಪೈಶಾಚಿಕ ದಾಳಿ ನಡೆಸುತ್ತಿರುವ ಅಮೆರಿಕಾ, ಜಗತ್ತಿನ ಸಾಮ್ರಾಜ್ಯಶಾಹಿ ಕೊಲೆಗಡುಕ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಟೀಕಿಸಿದ್ದಾರೆ.
ಯುದ್ಧ ಬಾದಿತ ದೇಶಗಳಲ್ಲಿರುವ ಭಾರತೀಯರನ್ನು ರಕ್ಷಿಸಲು ಹಾಗೂ ಇರಾನ್ ಮತ್ತು ಇತರೆ ದೇಶಗಳ ಮೇಲಿನ ಸಾಮ್ರಾಜ್ಯಶಾಹಿ ಯುದ್ಧಗಳನ್ನು ನಿಲ್ಲಿಸಲು ಆಗ್ರಹಿಸಿ ಸಿಐಟಿಯು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ(ಅಂಬೇಡ್ಕರ್ ವಾದ), ಸಹಬಾಳ್ವೆ ಉಡುಪಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಮಂಗಳವಾರ ಹಮ್ಮಿಕೊಳ್ಳಲಾದ ವಿಶ್ವ ಶಾಂತಿಗಾಗಿ ಯುದ್ಧ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.
ಬ್ರಿಟೀಷ್ ವಸಾಹತುಶಾಹಿಯ ರೀತಿಯಲ್ಲಿಯೇ ಇಂದು ಅಮೆರಿಕಾ ಸಾಮ್ರಾಜ್ಯಶಾಹಿ ಭಾರತದ ನೀತಿ ನಿಯಮ ಗಳನ್ನು ರೂಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂದು ಕೊಲೆಗಡುಕ ಅಮೇರಿಕಾವು 140 ಕೋಟಿ ಜನರ ಮೇಲೆ ಅಧಿಕಾರ ಚಲಾಯಿಸುತ್ತಿದ್ದರೂ ನಮ್ಮ ದೇಶದ ಸರಕಾ ಡೊಗ್ಗು ಸಲಾಮು ಹೊಡೆದು ಸಾಮ್ರಾಜ್ಯ ಶಾಹಿಯನ್ನು ಬೆಂಬಲಿಸುತ್ತಿದೆ. ಮುಂದೆ ಇದು ಭಾರತಕ್ಕೂ ಆಪತ್ತು ತರಲಿದೆ ಎಂದು ಅವರು ಎಚ್ಚರಿಸಿದರು.
ಕ್ಯೂಬಾದ ಮೇಲೆ ನಿರ್ಬಂಧ ಹೇರಿ ಅಲ್ಲಿನ ಜನರಿಗೆ ಆಹಾರ ಸಿಗದಂತೆ ಮಾಡಿದರೂ ಆ ಪುಟ್ಟ ದೇಶ ಸಾಮ್ರಾಜ್ಯ ಶಾಹಿ ವಿರುದ್ಧ ಸೆಟೆದು ನಿಂತಿದೆ. ವೆನೆಜುವೆಲಾದ ಅಧ್ಯಕ್ಷರ ಅಪಹರಣ, ಉಕ್ರೇನ್ ಬಳಸಿ ರಷ್ಯಾದ ಮೇಲೆ ಆಕ್ರಮಣ, ಇಸ್ರೇಲ್ ಬಳಸಿ ಪ್ಯಾಲೇಸ್ತಿನ್ ಜನರ ನರಮೇಧ, ಈಗ ತೈಲ ಸಂಪತ್ತು ವಶಪಡಿಸಿಕೊಳ್ಳಲು ಇರಾನ್ ಮೇಲೆ ಆಕ್ರಮಣ ಮಾಡಿ ಶಾಲೆಗಳ ಮೇಲೆ ಆಕ್ರಮಣ ಮಾಡಿ ಮಕ್ಕಳನ್ನು ಹಾಗೂ ಇರಾನ್ ಪರಮೋಚ್ಚ ನಾಯಕನನ್ನೇ ಕೊಂದಿದೆ. ಆದ್ದರಿಂದ ಅಮೇರಿಕಾದ ಅಧ್ಯಕ್ಷನನ್ನು ಅಂತಾ ರಾಷ್ಟ್ರೀಯ ಕಾನೂನಿನಡಿಯಲ್ಲಿ ಬಂಧಿಸಬೇಕು. ಯುದ್ಧ ಕೊನೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಸಹಬಾಳ್ವೆ ಸಂಘಟನೆಯ ಪ್ರಮುಖ ಇದ್ರೀಸ್ ಹೂಡೆ ಮಾತನಾಡಿ, ಅಮೆರಿಕಾ ತನ್ನ ಸ್ವಾರ್ಥಕ್ಕಾಗಿ ಸುಳ್ಳು ನೆಪಗಳನ್ನು ಮುಂದು ಮಾಡಿ ಹಲವು ರಾಷ್ಟ್ರಗಳಲ್ಲಿ ಪೈಶಾಚಿಕ ಕೃತ್ಯ ನಡೆಸಿ ಜನರನ್ನು ನಿರ್ಧಯವಾಗಿ ಮಹಿಳೆಯರು ಮಕ್ಕಳನ್ನೂ ಕೊಂದಿದೆ. ಇದು ಇಂದೂ ಮುಂದುವರಿದಿದೆ. ಇದನ್ನು ಎಲ್ಲಾ ಪ್ರಜ್ಞಾವಂತರು ಖಂಡಿಸಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಅಮೆರಿಕಾ ಇಂದು ತನ್ನ ಸ್ವಾರ್ಥಕ್ಕಾಗಿ ಭಾರತವನ್ನು ಕೂಡ ಬಲಿ ತೆಗೆದುಕೊಳ್ಳುತ್ತಿದೆ. ಅಮೆರಿಕಾದ ಆಟಕ್ಕೆ ನಮ್ಮ ದೇಶವನ್ನು ಆಳುವವರು ಕುಣಿಯುತ್ತಿದ್ದಾರೆ. ಅಮೆರಿಕಾದ ಯುದ್ಧ ದಾಹ ಮೂರನೇ ಮಹಾಯುದ್ಧಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ವಿ., ಕವಿರಾಜ್ ಎಸ್. ಕಾಂಚನ್ ಮಾತನಾಡಿದರು. ಸಿಐಟಿಯು ಸಂಘಟನೆಯ ಎಚ್.ನರಸಿಂಹ, ಉಮೇಶ್ ಕುಂದರ್, ನಳಿನಿ, ಮೋಹನ್, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ಸಾಲಿಡಾರಿಟಿ ಸಂಘಟನೆಯ ಅಫ್ವಾನ್, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರ್, ಮೈಸೂರು ವಿಭಾಗದ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ ಮೊದಲಾದವರು ಉಪಸ್ಥಿತರಿದ್ದರು.







