ತೆಂಕ ಗ್ರಾಪಂ ಕಟ್ಟಡದ ಮೊದಲನೆ ಮಹಡಿ ಉದ್ಘಾಟನೆ

ಕಾಪು, ಮಾ.11: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ತನ್ನ ಸಿಎಸ್‌ಆರ್ ಅಂಗವಾದ ಅದಾನಿ ಫೌಂಡೇಶನ್ ಮುಖಾಂತರ 25.15 ಲಕ್ಷ ರೂ. ಅನುದಾನದಲ್ಲಿ ತೆಂಕ ಗ್ರಾಮ ಪಂಚಾಯತ್ ಕಚೇರಿಯ ಹೊಸದಾಗಿ ನಿರ್ಮಿಸಲಾದ ಮೊದಲ ಮಹಡಿಯನ್ನು ಅನಾವರಣಗೊಳಿಸ ಲಾಯಿತು.
ಈ ಹೊಸ ಕಚೇರಿಯನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸುತ್ತಮುತ್ತಲಿನ 7 ಗ್ರಾಪಂಗಳಿಗೆ ವಿಶೇಷ ಸಿಆರ್‌ಎಸ್ ಅನುದಾನವನ್ನು ನೀಡಲಾಗಿದೆ. ಈ ಯೋಜನೆಯಡಿ ಅದಾನಿ ಫೌಂಡೇಶನ್ ಈಗಾಗಲೇ ಸುಮಾರು 12 ಕೋಟಿ ರೂ. ಮೌಲ್ಯದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಇದರಲ್ಲಿ ತೆಂಕ ಗ್ರಾಪಂ ನಲ್ಲೇ 2.10 ಕೋಟಿ ರೂ. ಮೌಲ್ಯದ ಕಾಮಗಾರಿಗಳು ಜಾರಿಗೊಂಡಿವೆ ಎಂದು ತಿಳಿಸಿದರು.
ಹೊಸದಾಗಿ ನಿರ್ಮಿಸಲಾದ ಈ ಕಚೇರಿ ಸ್ಥಳವು ಪಂಚಾಯತ್ ಆಡಳಿತದ ಕಾರ್ಯಕ್ಷಮತೆ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯನ್ನು ಮತ್ತಷ್ಟು ಸುಧಾರಿಸಲು ಸಹಾಯಕವಾಗಲಿದೆ. ಸುಧಾರಿತ ಮೂಲಸೌಕರ್ಯದಿಂದ ಪಂಚಾಯತ್ ಕಚೇರಿ ಗ್ರಾಮಸ್ಥರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುವ ಆಡಳಿತಾತ್ಮಕ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಅರ್ಜಿಗಳ ತ್ವರಿತ ನಿರ್ವಹಣೆ, ಅಧಿಕಾರಿಗಳ ನಡುವಿನ ಉತ್ತಮ ಸಂಯೋಜನೆ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆ ಬಲಪಡಲಿದೆ ಎಂದರು.
ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಸುರೇಖಾ, ಗ್ರಾಮ ಲೆಕ್ಕಾಧಿಕಾರಿ ವಿಜಯ್, ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್, ಬಾಲಚಂದ್ರ, ಅರುಣಾ ಕುಮಾರಿ, ಅದಾನಿ ಪವರ್ ಲಿಮಿಟೆಡ್‌ನ ಎಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಶನ್ ಸಿಬ್ಬಂದಿ ಅನುದೀಪ್ ಹಾಗೂ ಪಂಚಯಾತ್ ಸಿಬ್ಬಂದಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ ವಂದಿಸಿದರು.







