ಕೋಡಿ ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಸನ್ಮಾನ-ಸಂವಾದ ಕಾರ್ಯಕ್ರಮ

ಕುಂದಾಪುರ, ಮಾ:11: ಮಂಗಳೂರು ವಿಶ್ವವಿದ್ಯಾಲಯದ ಮಟ್ಟದ ಬಿ.ಎಡ್ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಪಡೆದ ಕೋಡಿ ಬ್ಯಾರೀಸ್ ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾರ್ಥಿನಿಗೆ ಸನ್ಮಾನ ಮತ್ತು ನೂತನ 2025-26ನೇ ಸಾಲಿನ ಬಿ.ಎಡ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಸಲಾಗಿತ್ತು.
ಬಿಎಡ್ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದ ಅನುಪಮಾ ಸಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ತದನಂತರ ಮಾತನಾಡಿದ ಅವರು, ತಮ್ಮ ಯಶಸ್ಸಿನ ಹಾದಿ ಮತ್ತು ಇದರೆಡೆಗೆ ಶಿಕ್ಷಕರ ಪರಿಶ್ರಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ನಿಯಮಿತವಾದ ಅಧ್ಯಯನ ಮತ್ತು ತರಗತಿಯಲ್ಲಿ ಏಕಾಗ್ರತೆ ಅತೀ ಮುಖ್ಯ ಎಂದರು.
ಬ್ಯಾರೀಸ್ ಸಮೂಹ ಸಂಸ್ಥೆಗಳ ಸಂಚಾಲಕ ಸಯ್ಯದ್ ಮೊಹಮ್ಮದ್ ಬ್ಯಾರಿ ಮಾತನಾಡಿ, ಸನ್ಮಾನಿತಗೊಂಡ ವಿದ್ಯಾರ್ಥಿನಿಯ ಸಾಧನೆಯಿಂದ ಸ್ಪೂರ್ತಿ ಪಡೆದು ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅವರು ಬಿ.ಎಡ್ ಪ್ರಶಿಕ್ಷಣಾರ್ಥಿಗಳೊಂದಿಗಿನ ಸಂವಾದದಲ್ಲಿ ತ್ಯಾಗ, ನಮ್ಮ ಸಾಧನೆಗೆ ಅಡಿಪಾಯ, ಸತತ ಪ್ರಯತ್ನ ದಿಂದ ಸಾಧನೆ ಮಾಡಲು ಸಾಧ್ಯ ಮತ್ತು ಮುಂಬರುವ ಪರೀಕ್ಷೆಗಳಿಗೆ ತಮ್ಮನ್ನು ಹೇಗೆ ಸಿದ್ಧಪಡಿಸಿ ಕೊಳ್ಳಬೇಕು ಎನ್ನುವ ಕುರಿತು ಪ್ರಾಯೋಗಿಕ ಸಲಹೆಗಳನ್ನು ನೀಡಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸೀಫ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತ ನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ದ್ವಿತೀಯ ರ್ಯಾಂಕ್ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಮುಂದೆ ಅವರು ಉತ್ತಮ ಶಿಕ್ಷಕಿಯಾಗಿ ರೂಪುಗೊಳ್ಳಲಿ ಮತ್ತು ಅವರ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಅಶ್ವಿನಿ ಶೆಟ್ಟಿ ಮಾತನಾಡಿ, ನಾವು ಮಾಡುವ ಕೆಲಸವು ಇಷ್ಟೇ ಸಾಕು ಎಂದು ಭಾವಿಸಬಾರದು. ಯಾವಾಗ ನಾವು ಇದು ಸಾಲದು ಇನ್ನು ಹೆಚ್ಚು ಮಾಡಬೇಕು ಎಂದು ಕೊಳ್ಳುತ್ತೇವೆಯೋ ಆಗ ಹೆಚ್ಚಿನ ಸಾಧನೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಸನ್ಮಾನಿತಗೊಂಡ ವಿದ್ಯಾರ್ಥಿಯ ಬದುಕು ಎಲ್ಲರಿಗೂ ಸ್ಪೂರ್ತಿದಾಯಕವಾಗಬೇಕು. ವಿದ್ಯಾರ್ಥಿಗಳು ಇನ್ನು ಹೆಚ್ಚು ಆಸಕ್ತಿಯಿಂದ ಕಲಿತು ಈ ವಿದ್ಯಾಸಂಸ್ಥೆಗೆ ಉತ್ತಮ ಹೆಸರನ್ನು ತರಬೇಕು. ಅದರೊಂದಿಗೆ ನಿಮ್ಮ ಮುಂದಿನ ಜೀವನವೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್ ಡೀನ್ ಡಾ.ಪೂರ್ಣಿಮಾ ಟಿ., ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಪ್ರವೀಣ್ ಕುಮಾರ್ ಕೆ.ಪಿ., ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲೆ ಅಫ್ರೀನ್ ಖಾನ್, ಉಪನ್ಯಾಸಕರು ಮತ್ತು ಬಿಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಫೀರ್ದೋಸ್ ಸ್ವಾಗತಿಸಿದರು. ಬಿ.ಎಡ್ ಪ್ರಶಿಕ್ಷಣಾರ್ಥಿ ದೀಕ್ಷಿತ ಮತ್ತು ಆನಮ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಸುಮನ ವಂದಿಸಿದರು.







