ಕೊಂಕಣ ರೈಲ್ವೆ ಮಾರ್ಗದ ಮುಂಗಾರುಪೂರ್ವ ವಾರ್ಷಿಕ ತಪಾಸಣೆ

ಉಡುಪಿ ಮಾ.14: ಮುಂಬಯಿಯಿಂದ ಮಂಗಳೂರು ಬಳಿಯ ತೋಕೂರುವರೆಗೆ ವ್ಯಾಪಿಸಿರುವ ಕೊಂಕಣ ರೈಲ್ವೆ ಮಾರ್ಗದ ವಾರ್ಷಿಕ ತಪಾಸಣೆ ನಡೆಯುತ್ತಿದೆ. ಕೊಂಕಣ ರೈಲ್ವೆ ಮಾರ್ಗ ಪ್ರಾಕೃತಿಕ ಸೌಂದರ್ಯ ದೊಂದಿಗೆ ಮಳೆಗಾಲದ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಒಡ್ಡುತಿದ್ದು, ಮುಂಗಾರು ಮಳೆ ಪ್ರಾರಂಭಗೊಳ್ಳುವ ಮೊದಲೇ ಮಾರ್ಗದ ತಪಾಸಣೆಯನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ.
ಈ ಬಾರಿಯ ಮುಂಗಾರು ಪೂರ್ವ ಪರಿವೀಕ್ಷಣೆಯ ನೇತೃತ್ವವನ್ನು ಕೊಂಕಣ ರೈಲ್ವೆ ನಿಗಮದ ಸಿಎಂಡಿ ಸಂತೋಷ್ ಕುಮಾರ್ ಝಾ ಅವರೇ ವಹಿಸಿದ್ದರು. ನಿಗಮದ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಅವರೊಂದಿಗಿದ್ದರು.
ಮಳೆಗಾಲ ಪ್ರಾರಂಭಕ್ಕೆ ಮೊದಲೇ ಮಾರ್ಗದ ಸುರಕ್ಷತೆ, ಮೂಲಭೂತ ಸೌಕರ್ಯಗಳಲ್ಲಿ ಕೊರತೆಯನ್ನು ಗಮನಿಸಿ ಅವುಗಳಿಗೆ ಪರಿಹಾರ ಒದಗಿಸಿ ಮಳೆಗಾಲದಲ್ಲಿ ರೈಲ್ವೆ ಪ್ರಯಾಣಿಕರಿಗೆ ನಿರಂತರ ಸುರಕ್ಷಿತ ಪ್ರಯಾಣವನ್ನು ಖಚಿತ ಪಡಿಸುವುದು ಈ ಪರಿವೀಕ್ಷಣೆಯ ಮುಖ್ಯ ಉದ್ದೇಶವಾಗಿರುತ್ತದೆ.
ಮೊದಲು ಮಡಗಾಂವ್‌ದಿಂದ ತೋಕೂರು ನಡುವಿನ ವಿಭಾಗವನ್ನು ಪರಿಶೀಲಿಸಿದ ಬಳಿಕ ಮರುದಿನ ಮಡಗಾಂವ್ ದಿಂದ ರೋಹಾವರೆಗಿನ ಭಾಗವನ್ನು ಪರಿಶೀಲಿಸಲಾಯಿತು. ಪರೀಕ್ಷೆಯ ವೇಳೆ ರೈಲು ಹಳಿ, ಸೇತುವೆಗಳು, ಸುರಂಗಮಾರ್ಗ, ಇಳಿಜಾರು, ಸಿಗ್ನಲ್ ವ್ಯವಸ್ಥೆ, ಮಳೆಗಾಲದಲ್ಲಿ ನೀರು ನಿಲ್ಲುವ ಪ್ರದೇಶಗಳು, ನಿಲ್ದಾಣಗಳ ಮೂಲಭೂತ ಸೌಲಭ್ಯ ಹಾಗೂ ಸೋಲಾರ್ ಲೈಟನಿಂಗ್ ಅಳವಡಿಕೆಗಳನ್ನು ಸಮಗ್ರವಾಗಿ ತಪಾಸಣೆ ನಡೆಸಲಾಯಿತು.







