ಈದುಲ್ ಫಿತ್ರ್ ಶಾಂತಿ, ಸೌಹಾರ್ದತೆಯ ಹಬ್ಬ: ಉಡುಪಿ ಜಿಲ್ಲಾ ಖಾಝಿ ಮಾಣಿ ಉಸ್ತಾದ್

ಉಡುಪಿ: ಪವಿತ್ರ ರಂಝಾನ್ ತಿಂಗಳಲ್ಲಿ ನಾವು ಪಾಲಿಸಿದ ಶಿಸ್ತು, ಸಂಯಮ ಮತ್ತು ಪ್ರಾರ್ಥನೆಗಳು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದೆ ಜೀವನದುದ್ದಕ್ಕೂ ಆ ದೈವಭಕ್ತಿಯನ್ನು ಉಳಿಸಿಕೊಳ್ಳುವಂತಾಗಲಿ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಮ್ಮ ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.
ಹಸಿದವರಿಗೆ ಉಣಬಡಿಸುವುದು ಮತ್ತು ಬಡವರ ಕಣ್ಣೀರು ಒರೆಸುವುದು ಈ ಹಬ್ಬದ ಮುಖ್ಯ ಉದ್ದೇಶ. ’ಫಿತ್ರ್ ಝಕಾತ್’ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯ. ನೆರೆಹೊರೆಯವರೊಂದಿಗೆ, ಅನ್ಯಧರ್ಮೀಯ ಬಾಂಧವರೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ವರ್ತಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು. ಹಬ್ಬದ ಹೆಸರಿನಲ್ಲಿ ಅನಾಚಾರ ಅಥವಾ ದುಂದುವೆಚ್ಚಗಳಿಗೆ ಅವಕಾಶ ನೀಡದೆ, ಶರೀಅತ್ ಚೌಕಟ್ಟಿನೊಳಗೆ ಸಂಭ್ರಮಿಸಬೇಕು.
ರಂಝಾನ್ ನಮಗೆ ಕಲಿಸಿದ ತಾಳ್ಮೆ ಮತ್ತು ದೈವಭಕ್ತಿ ನಮ್ಮ ಮುಂದಿನ ಜೀವನದ ದಾರಿದೀಪವಾಗಲಿ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಅಲ್ಲಾಹನು ಬರಕತ್ ನೀಡಲಿ. ಈದ್ ಹಬ್ಬದ ಪವಿತ್ರ ಸಂದೇಶವು ಜಾಗತಿಕ ಸಾಮರಸ್ಯ, ಪರಸ್ಪರ ಗೌರವ ಮತ್ತು ಎಲ್ಲಾ ಗಡಿಗಳನ್ನು ಮೀರಿದ ಶಾಶ್ವತ ಶಾಂತಿಗೆ ಪ್ರೇರಣೆಯಾಗಲಿ ಎಂದು ಅವರು ಪ್ರಕಟಣೆಯಲ್ಲಿ ಹಾರೈಸಿದರು.
‘ಸೃಷ್ಟಿಗಳ ಮೇಲಿನ ಪ್ರೀತಿಯ ಸಂಗಮ’
ಪವಿತ್ರ ರಂಝಾನ್ ತಿಂಗಳ ಪೂರ್ತಿ ಉಪವಾಸ, ಪ್ರಾರ್ಥನೆ ಮತ್ತು ಆತ್ಮಾವಲೋಕನ ನಡೆಸಿದ ಬಳಿಕ ನಾವೆಲ್ಲರೂ ಈದುಲ್-ಫಿತರ್‌ನ ಸಂಭ್ರಮದಲ್ಲಿದ್ದೇವೆ. ಈ ಹಬ್ಬವು ಕೇವಲ ಹಬ್ಬವಲ್ಲ, ಇದು ಸೃಷ್ಟಿಕರ್ತನ ಮೇಲಿನ ಭಕ್ತಿ ಮತ್ತು ಸೃಷ್ಟಿಗಳ ಮೇಲಿನ ಪ್ರೀತಿಯ ಸುಂದರ ಸಂಗಮವಾಗಿದೆ ಎಂದು ಉಡುಪಿ ಜಿಲ್ಲಾ ಸುನ್ನೀ ಕೋ-ಓರ್ಡಿನೇಶನ್ ಅಧ್ಯಕ್ಷ ಕೆ.ಎ. ಅಬ್ದುರ‌್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ತಿಳಿಸಿದ್ದಾರೆ.
ತಿಂಗಳ ಪೂರ್ತಿ ಹಸಿವು ಮತ್ತು ನೀರಡಿಕೆಯನ್ನು ಸಹಿಸಿಕೊಳ್ಳುವ ಮೂಲಕ ನಾವು ಬಡವರ ನೋವನ್ನು ಅರ್ಥ ಮಾಡಿಕೊಂಡಿದ್ದೇವೆ. ಈ ಸಂಯಮವು ನಮ್ಮಲ್ಲಿ ನಮ್ರತೆಯನ್ನು ಬೆಳೆಸಿದೆ. ಈದ್ ಎಂದರೆ ಕೇವಲ ಹೊಸ ಬಟ್ಟೆ ಧರಿಸುವುದು ಅಥವಾ ಸಿಹಿತಿಂಡಿ ತಿನ್ನುವುದಲ್ಲ. ನಮ್ಮಲ್ಲಿರುವ ಅಹಂಕಾರ ವನ್ನು ತೊರೆದು, ದೀನ-ದಲಿತರ ಕಣ್ಣೀರು ಒರೆಸುವುದೇ ಈ ಹಬ್ಬದ ನೈಜ ಉದ್ದೇಶವಾಗಿದೆ.
ಈ ಸುದಿನದಂದು ಜಗತ್ತಿನಾದ್ಯಂತ ನಡೆಯುತ್ತಿರುವ ಅಶಾಂತಿ, ಯುದ್ಧ ಮತ್ತು ರೋಗರುಜಿನಗಳು ದೂರವಾಗಲಿ ಎಂದು ಪ್ರಾರ್ಥಿಸೋಣ. ನಮ್ಮ ದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಹೋದರತೆ ನೆಲೆಸಲಿ. ರಂಝಾನ್ ತಿಂಗಳಲ್ಲಿ ನಾವು ರೂಢಿಸಿಕೊಂಡ ಶಿಸ್ತು ಮತ್ತು ಸತ್ಕರ್ಮಗಳು ವರ್ಷದ ಉಳಿದ ದಿನಗಳಲ್ಲೂ ನಮ್ಮ ಜೀವನದ ಭಾಗವಾಗಲಿ. ಪ್ರೀತಿ ಹಂಚೋಣ, ದ್ವೇಷ ಅಳಿಸೋಣ. ಎಲ್ಲಾ ನಾಡಬಾಂಧವರಿಗೂ ಈದುಲ್-ಫಿರ್ತ ಹಬ್ಬದ ಹೃದಯಸ್ಪರ್ಶಿ ಶುಭಾಶಯಗಳು ಎಂದು ಅವರು ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.







