ಆಲೂರು ಕೊರಗ ಸಮುದಾಯದ ಭೂವಿವಾದ: ಜಂಟಿ ಸ್ಥಳ ಪರಿಶೀಲನೆ

ಕುಂದಾಪುರ, ಎ.24: ಕುಂದಾಪುರ ತಾಲೂಕು ವ್ಯಾಪ್ತಿಯ ಆಲೂರು ಗ್ರಾಮದ ಸರ್ವೇ ನಂ 153 ಸಂಬಂಧ ಬಹುಕಾಲದಿಂದ ಮುಂದುವರಿದಿ ರುವ ಭೂಮಿ ವಿವಾದದ ಕುರಿತು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸರ್ವೇ ಇಲಾಖೆ, ಐಟಿಡಿಪಿ ಹಾಗೂ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ಎ.22ರಂದು ಜಂಟಿ ಸ್ಥಳ ಪರಿಶೀಲನೆ ನಡೆಸಿದರು.
ಕೊರಗ ಸಮುದಾಯದವರು, ಸ್ಥಳೀಯ ಮುಖಂಡರು ಹಾಗೂ ದಲಿತ ಹಕ್ಕುಗಳ ಸಂಘಟನೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸ್ಥಳ ಪರಿಶೀಲನೆ ವೇಳೆ ಸರ್ವೇ ಇಲಾಖೆಯವರು ಗೇರು ನಿಗಮ ನೀಡಿದ ನಕ್ಷೆಯ ಆಧಾರದಲ್ಲಿ ಭೂಮಿಯನ್ನು ಗುರುತಿಸಿದ್ದು, ಈ ಭೂಮಿ ಅಬ್ಬಿಗುಡ್ಡೆ ಮೀಸಲು ಅರಣ್ಯದ 30 ಎಕರೆ ಬ್ಲಾಕ್‌ಗೆ ಸೇರಿತ್ತೇ ಅಥವಾ ಪ್ರತ್ಯೇಕ ಕಂದಾಯ ಭೂಮಿಯೇ ಎಂಬುದರಲ್ಲಿ ಇನ್ನಷ್ಟು ಸ್ಪಷ್ಟತೆ ಅಗತ್ಯವಿದೆ.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ, ಈ ಭೂಮಿ ಸರಕಾರದಿಂದ ಶೇರು ಬಂಡವಾಳ ರೂಪದಲ್ಲಿ ನೀಡಲ್ಪಟ್ಟಿದ್ದು, ಕೇವಲ ಗೇರು ನಡುತೋಪು ನಿರ್ಮಾಣಕ್ಕಾಗಿ 1993ರಲ್ಲಿ 30 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಭೂಮಿಯ ಮೇಲೆ ಶಾಶ್ವತ ಹಕ್ಕು ನಿಗಮಕ್ಕಿಲ್ಲ ಹಾಗೂ ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರವೂ ಇಲ್ಲ, ಸರಕಾರದ ಮಟ್ಟದಲ್ಲೇ ಅಂತಿಮ ನಿರ್ಧಾರವಾಗಬೇಕು ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಪ್ರತಿಕ್ರಿಯಿಸಿ, ಐಟಿಡಿಪಿ ಇಲಾಖೆ ಸಹಕಾರ ದೊಂದಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮೂಲ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊರಗ ಸಮುದಾಯದ ಫಲಾನುಭವಿಗಳ ಪರವಾಗಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ತಹಶೀಲ್ದಾರ್ ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಸ್ಥಳ ಪರಿಶೀಲನೆಯಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವಿಭಾಗೀಯ ವ್ಯವಸ್ಥಾಪಕ ರವೀಂದ್ರ ಡಿ.ಎಂ., ಐಟಿಡಿಪಿ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ನಾರಾಯಣ ಸ್ವಾಮಿ, ವ್ಯವಸ್ಥಾಪಕ ವಿಶ್ವನಾಥ ಶೆಟ್ಟಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ದಲಿತ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ಮಾಜಿ ಜಿಪಂ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ, ಆಲೂರು ಗ್ರಾಪಂ ನಿಕಟ ಪೂರ್ವ ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ರವಿ ಶೆಟ್ಟಿ, ವಂಡ್ಸೆ ಕಂದಾಯ ನೀರಿಕ್ಷಕ ರಾಘವೇಂದ್ರ, ಕೊರಗ ಸಮುದಾಯದ ಫಲಾನುಭವಿಗಳಾದ ಗಣೇಶ, ನೀಲು, ಚಂದ್ರವತಿ, ಸುರೇಂದ್ರ, ಶೇಖರ, ರೇಷ್ಮಾ ನಾಡ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿ, ಗೇರು ನಿಗಮ ಹಾಗೂ ಸರ್ವೇ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಂಭೀರ ಸಾಮಾಜಿಕ ಅನ್ಯಾಯ: ಶ್ರೀಧರ ನಾಡಾ
ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಕೂರು ಗ್ರಾಮದ ಸರ್ವೇ ನಂ 135ರಲ್ಲಿ 1984-85ರಲ್ಲಿಯೇ ಸರಕಾರ ದಿಂದ ಭೂಹೀನ ಕುಟುಂಬಗಳಿಗೆ ಭೂಮಿ ಮಂಜೂರಾತಿ ಮಾಡಲಾಗಿದೆ. ಸರ್ವೇ ನಂ 135/1ರಲ್ಲಿ ಕೊರಗ ಪರಿಶಿಷ್ಟ ಪಂಗಡದ ಸುಕ್ರ ಅವರಿಗೆ 2 ಎಕರೆ ಹಾಗೂ ಸರ್ವೇ ನಂ 135/2 ರಲ್ಲಿ ಪರಿಶಿಷ್ಟ ಜಾತಿಯ ರಾಮ ಹರಿಜನ ಅವರಿಗೆ 2 ಎಕರೆ ಭೂಮಿ ಮಂಜೂರಾಗಿ ಆರ್‌ಟಿಸಿ ದಾಖಲೆಗಳಲ್ಲಿಯೂ ಇದು ಸ್ಪಷ್ಟವಾಗಿದೆ.
ಆದರೆ, ಈ ಮಂಜೂರಾತಿ ಇದ್ದರೂ ಹಕ್ಕುದಾರರಿಗೆ ಭೂಮಿಯ ಸ್ವಾಧೀನ ನೀಡಲಾಗಿಲ್ಲ. ಬದಲಾಗಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಈ ಭೂಮಿಯಲ್ಲಿ ಗೇರು ನಡುತೋಪು ನಿರ್ಮಿಸಿ ತನ್ನ ವಶದಲ್ಲಿಟ್ಟುಕೊಂಡಿದೆ. ಅನಕ್ಷರಸ್ಥ ಮತ್ತು ಆರ್ಥಿಕವಾಗಿ ಹಿಂದುಳಿದ ಈ ಕುಟುಂಬಗಳು ದಶಕಗಳ ಕಾಲ ತಮ್ಮ ಹಕ್ಕಿನಿಂದ ವಂಚಿತರಾಗಿದ್ದು, ಇದು ಗಂಭೀರ ಸಾಮಾಜಿಕ ಅನ್ಯಾಯವಾಗಿದೆ.
ಸುಕ್ರ ಹಾಗೂ ರಾಮ ಹರಿಜನ ಅವರಿಗೆ ತಕ್ಷಣ ಭೂಮಿಯ ಸ್ವಾಧೀನ ಒದಗಿಸಬೇಕು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಕ್ರಮ ಸ್ವಾಧೀನವನ್ನು ತೆರವುಗೊಳಿಸಬೇಕು. ಆಲೂರು ಸರ್ವೇ ನಂ 153 ಹಾಗೂ ಹರ್ಕೂರು ಸರ್ವೇ ನಂ 135 ಎರಡು ಡಿಸಿ ಮನ್ನಾ ಭೂಮಿ ಫಲಾನುಭವಿಗಳಿಗೆ ನ್ಯಾಯಯುತ ಪರಿಹಾರ ನೀಡಬೇಕು. ಡಿಸಿ ಮನ್ನಾ ಭೂಮಿಯ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಕೊನೆಗಾಣಿಸುವವರೆಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿ ಸಲಾಗುವುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.






