ನಾರಿ ಶಕ್ತಿ ಹೆಸರಿನಲ್ಲಿ ಬಿಜೆಪಿಯಿಂದ ಮಹಿಳೆಯರಿಗೆ ರಾಜಕೀಯ ಮೋಸ: ಕೃಪಾ ಆಳ್ವಾ ಆರೋಪ

ಉಡುಪಿ, ಎ.30: ‘ನಾರಿ ಶಕ್ತಿ’ ಹೆಸರಿನಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ಕೆಲವು ಕ್ರಮಗಳನ್ನು ಕೈಗೊಳ್ಳುತಿದ್ದು, 2023ರ ಮಹಿಳಾ ಮೀಸಲಾತಿ ಕಾನೂನನ್ನು ಯಾವುದೇ ಷರತ್ತಿಲ್ಲದೆ ತಕ್ಷಣ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್‌ನ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರಾದ ಕೃಪಾ ಆಳ್ವ ಆಗ್ರಹಿಸಿದ್ದಾರೆ.
ಗುರುವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಮಹಿಳೆಯರ ಸಬಲೀಕರಣದ ಹೆಸರಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಕಾಯ್ದೆ 2026 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಸೂದೆ ಮೂಲಕ ಚುನಾವಣಾ ಕ್ಷೇತ್ರಗಳನ್ನು ತಮ್ಮ ಲಾಭಕ್ಕೆ ತಿರುಗಿಸಲು ಬಿಜೆಪಿ ಪ್ರಯತ್ನಗಳನ್ನು ನಡೆಸುತ್ತಿದೆ ಎಂದವರು ಆರೋಪಿಸಿದರು.
2011ರ ಜನಗಣತಿ ಆಧಾರದಲ್ಲಿ ಭವಿಷ್ಯದ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿದ ಕೃಪಾ ಆಳ್ವ, 2023ರಲ್ಲಿ ಸದನ ಸಂಪೂರ್ಣ ಬಹುಮತದಿಂದ ಅಂಗೀಕರಿಸಿದ ಮಹಿಳಾ ಮೀಸಲಾತಿ ಕಾನೂನನ್ನು ಯಾಕೆ ಇನ್ನೂ ಜಾರಿಗೊಳಿಸಿಲ್ಲ ಎಂಬ ಬಗ್ಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮಣಿಪುರದಲ್ಲಿ ಮಹಿಳೆಯರ ಮೇಲಿನ ಹಿಂಸೆ, ಬೆಲೆ ಏರಿಕೆ, ಎಲ್‌ಪಿಜಿ ದರ ಏರಿಕೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ, ಮತದಾರರ ಪಟ್ಟಿಯಿಂದ ಮಹಿಳೆಯರ ಹೆಸರು ಕಳೆದುಹೋಗುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳಿದ್ದು ಇವುಗಳ ಕುರಿತು ನರೇಂದ್ರ ಮೋದಿ ಮೌನ ವಹಿಸಿದ್ದಾರೆ ಎಂದು ಅವರು ಟೀಕಿಸಿದರು.
ಇದೇ ವೇಳೆ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್‌ವಿಂಗಡನೆ ಪ್ರಕ್ರಿಯೆಗೆ ಕಟ್ಟಿ ಹಾಕುವುದು ಸರಿಯಲ್ಲ. ಇದರಿಂದ ದಕ್ಷಿಣ ರಾಜ್ಯಗಳ ಪ್ರತಿನಿಧಿತ್ವ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.
60ಕ್ಕೂ ಅಧಿಕ ಮಹಿಳಾ ಸಂಘಟನೆಗಳು ಕೇಂದ್ರ ಸರಕಾರದ ಈ ಕ್ರಮವನ್ನು ವಿರೋಧಿಸಿವೆ. ಈ ವಿಷಯದಲ್ಲಿ ಸರಕಾರ ಸಂಪೂರ್ಣ ಪಾರದರ್ಶಕತೆ ತೋರಬೇಕು ಹಾಗೂ ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸ ಬೇಕು. 2023ರ ಮಹಿಳಾ ಮೀಸಲಾತಿ ಕಾನೂನು ಯಾವುದೇ ಷರತ್ತುಗಳಿಲ್ಲದೇ ತಕ್ಷಣ ಜಾರಿಗೆ ಬರಬೇಕು. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಲೆಟ್ ಪಿಂಟೊ ಮಾತನಾಡಿ, ಕ್ಷೇತ್ರ ವಿಂಗಡನೆ ರಹಿತವಾಗಿ 2023ರಲ್ಲಿ ಅಂಗೀಕಾರ ಗೊಂಡಿರುವ ಶೇ.33 ಮಹಿಳಾ ಮೀಸಲಾತಿಯನ್ನು ಅನುಷ್ಟಾನ ಗೊಳಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಕಲ್ಪಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಕ್ಷೇತ್ರ ಪುನರ್‌ವಿಂಗಡನೆ ಹಾಗೂ ಜನಗಣತಿಯೊಂದಿಗೆ ಜೋಡಿಸಿಕೊಂಡು ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಕೇಂದ್ರ ಸರಕಾರದ ಕುತಂತ್ರಕ್ಕೆ ಸೋಲಾಗಿರುವುದೇ ಹೊರತು 2023ರಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಮಸೂದೆಯಲ್ಲ. ಶೇ.33ರಷ್ಟು ಮೀಸಲಾತಿಯ ಈ ಮಸೂದೆ ಯಥವತ್ತಾಗಿ ಜಾರಿಗೊಳಿಸಬೇಕು ಎಂದರು.
80ರ ದಶಕದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಹಿಳಾ ಮೀಸಲಾತಿಯ ಕನಸು ಕಂಡಿದ್ದರು. 1973-74ನೆ ಸಾಲಿನಲ್ಲಿ ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಸ್ಥಳೀಯಾಡಳಿತದಲ್ಲಿ ಶೇ. 33 ಮಹಿಳಾ ಮೀಸಲಾತಿ ಯನ್ನು ಜಾರಿಗೊಳಿಸಿರುವುದು ಕಾಂಗ್ರೆಸ್. ಇದೀಗ ಕ್ಷೇತ್ರ ವಿಂಗಡನೆಯ ಮಹಿಳಾ ಮೀಸಲಾತಿಯ ವಿಧೇಯಕಕ್ಕೆ ಸೋಲಾಗಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ಬೊಬ್ಬೆ ಹಾಕುತ್ತಿರುವ ಬಿಜೆಪಿಯ ಮಹಿಳೆಯರು, ಕೇಂದ್ರ ಸರಕಾರಕ್ಕೆ ಈಗಾಗಲೇ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಜಾರಿಗೆ ಒತ್ತಾಯಿಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೊ, ಬ್ರಹ್ಮಾವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಡಾ ಸುನೀತಾ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಹೆಬ್ಬಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಹ ಸಂಚಾಲಕರಾದ ರೋಶನಿ ಒಲಿವರ್ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿತಾ ಡಿಸೋಜ ಉಪಸ್ಥಿತರಿದ್ದರು.






