ಕುಂದಾಪುರಕ್ಕೆ ಅಗತ್ಯ ಹಾಸ್ಟೆಲ್ ಮಂಜೂರು ಮಾಡಿ: ಶಾಸಕರ ಆಗ್ರಹ

ಕುಂದಾಪುರ : ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಉಡುಪಿ, ಕುಂದಾಪುರದ ಹಿಂದುಳಿದ ವರ್ಗಗಳ ಇಲಾಖೆಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ಅದರಲ್ಲೂ ಕುಂದಾಪುರಕ್ಕೆ ಹೆಚ್ಚಿನ ಮಕ್ಕಳು ಬರುತ್ತಿದ್ದು ಇಲ್ಲಿ ಅವರಿಗೆ ಅಗತ್ಯ ಹಾಸ್ಟೆಲ್‌ಗಳ ಕೊರತೆಯಿದೆ. ಸರಕಾರಕ್ಕೆ ಅನೇಕ ಬಾರಿ ಹೆಚ್ಚುವರಿ ಹಾಸ್ಟೆಲ್‌ಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಸರಕಾರಿ ಶಾಲಾ- ಕಾಲೇಜುಗಳಲ್ಲಿ ಓದಲು ಬರುವ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಹಾಸ್ಟೆಲ್ ಒದಗಿಸಿ ದಾಖಲಾತಿ ನೀಡಿ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಗುರುವಾರ ಕುಂದಾಪುರದ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿ.ಪಂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕುಂದಾಪುರದ ವತಿಯಿಂದ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಹಾಸ್ಟೆಲ್‌ನಲ್ಲಿರುವ ಸಾಧಕ ವಿದ್ಯಾರ್ಥಿ ಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಸರಕಾರದ ಹಾಸ್ಟೆಲ್‌ಗಳ ಸೌಲಭ್ಯ ಪಡೆದ ವಿದ್ಯಾರ್ಥಿಗಳು ಅದನ್ನು ಸದುಪ ಯೋಗಪಡಿಸಿಕೊಂಡು ಉತ್ತಮವಾಗಿ ಓದಿ, ಒಳ್ಳೆಯ ಬದುಕು ಕಟ್ಟಿಕೊಳ್ಳ ಬೇಕು. ಅಗತ್ಯ ಸಿಬಂದಿಗಳ ಕೊರತೆಯ ನಡುವೆಯೂ ನಡೆಯುತ್ತಿರುವ ಹಾಸ್ಟೆಲ್ ವಾರ್ಡನ್, ಸಿಬಂದಿ ಎಲ್ಲರ ಪರಿಶ್ರಮದಿಂದ ಉತ್ತಮ ಫಲಿತಾಂಶ ಬಂದಿದೆ. ಇಲ್ಲಿನ ಹಾಸ್ಟೆಲ್ ಗಳ ವಾತಾವರಣವೇ ಇದಕ್ಕೆ ಸಾಕ್ಷಿ. ಕೈ ತೋಟ, ಹೂವಿನ ಗಿಡಗಳ ಬೆಳೆಸುವಿಕೆ, ಗೋಡೆ ಬರಹ, ಚಿತ್ರಕಲೆ ಆಕರ್ಷಕವಾಗಿದೆ ಎಂದವರು ನುಡಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಎಸೆಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಕೆದೂರು ಹಾಸ್ಟೆಲ್‌ನ ಸಂಗೀತ, ದ್ವಿತೀಯ ಸ್ಥಾನಿ ಕುಂದಾಪುರ ಹಾಸ್ಟೆಲ್‌ನ ಪ್ರೇಕ್ಷಾ, ತೃತೀಯ ಸ್ಥಾನಿ ಶ್ರಾವ್ಯಾ ಎಂ., ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೋಟೇಶ್ವರ ಹಾಸ್ಟೆಲ್ ನ ದಿವ್ಯಾ ಮಾದೇವ ನಾಯ್ಕ, ಕೋಟೇಶ್ವರ ಹಾಸ್ಟೆಲ್‌ನ ಧನ್ಯ, ಕುಂದಾಪುರ ಹಾಸ್ಟೆಲ್‌ನ ನಾಗಶ್ರೀ, ಕುಂದಾಪುರ ಹಾಸ್ಟೆಲ್ ನ ರಿತಿಕಾ, ವಾಣಿಜ್ಯ ವಿಭಾಗದ ಖಾರ್ವಿಕೇರಿ ಹಾಸ್ಟೆಲ್‌ನ ಪ್ರಜ್ಞಾ ಭಾಸ್ಕರ ಆಚಾರಿ, ಕುಂದಾಪುರ ಹಾಸ್ಟೆಲ್‌ನ ಸಜಿನಿ, ಕುಂದಾಪುರ ಹಾಸ್ಟೆಲ್‌ನ ಅಮೃತಾ, ಕಲಾ ವಿಭಾಗದ ಶಂಕರನಾರಾಯಣ ಹಾಸ್ಟೆಲ್‌ನ ಅನುಶ್ರೀ, ಕುಂದಾಪುರ ಹಾಸ್ಟೆಲ್‌ನ ದೀಪ್ತಿ, ಬೈಂದೂರು ಹಾಸ್ಟೆಲ್‌ನ ಪ್ರಿಯಾ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ವಿವಿಧ ನಿಲಯಗಳ ಮೇಲ್ವಿಚಾರಕರು, ಅಡುಗೆ ಸಹಾಯಕ ರನ್ನು ಸಹ ಗೌರವಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್ ಸಿ., ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್. ಶೋಭಾ ಶೆಟ್ಟಿ, ನಾಗೇಶ್ ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಆಶಾದೇವಿ ನಾಯಕ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ನಿಲಯ ಮೇಲ್ವಿಚಾರಕರಾದ ಆಶಾಲತಾ ಸಾಧಕರ ಪಟ್ಟಿ ವಾಚಿಸಿ, ಶೇಖರ್ ಗೌಡ ಕಾರ್ಯಕ್ರಮ ನಿರೂಪಿಸಿದರು. ವಸಂತ ಕುಮಾರಿ ವಂದಿಸಿದರು.






