ಬಿಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ ವಿರುದ್ಧ ಶಾಸಕರ ಆಕ್ರೋಶ; ದಿಶಾ ಸಭೆಯಲ್ಲಿ ಸೂಕ್ತ ಕ್ರಮಕ್ಕೆ ಒತ್ತಾಯ

ಉಡುಪಿ, ಮೇ 2: ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಜಿಲ್ಲೆಯ ಶಾಸಕರು ಬಿಎಸ್‌ಎನ್‌ಎಲ್ ನೆಟ್‌ವಕ್ ಸಮಸ್ಯೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ದರು. ಇದರಿಂದ ಗ್ರಾಹಕರು ತೀರಾ ತೊಂದರೆ ಅನುಭವಿಸಿ, ಜನಪ್ರತಿನಿಧಿಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ ಎಂದು ಶಾಸಕರು ಸಭೆಯಲ್ಲಿ ಆರೋಪಿಸಿದ್ದಾರೆ.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಟಪಾಡಿಯಲ್ಲಿ ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸಿಗದೆ ಜನ ಪರ ದಾಡುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ವಿದ್ಯುತ್ ಕಡಿತಗೊಂಡರೆ ಬಿಸ್ಸೆನ್ನೆಲ್ ಟವರ್ ಡೆಡ್ ಆಗುತ್ತದೆ. ಯಾವುದೇ ಬ್ಯಾಕ್ ಅಪ್ ಇಲ್ಲ. ಹೀಗೆ ಆದರೆ ಜನ ಬಿಸ್ಸೆನ್ನೆಲ್ ಹೇಗೆ ಬಳಸುವುದು ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಜಿಲ್ಲೆಯಲ್ಲಿ ಈಗಾಗಲೇ 196 ಟವರ್‌ಗಳಿದ್ದು, ಇದರಲ್ಲಿ 115 ಟವರ್ 4-ಜಿ ಗೆ ಉನ್ನತೀಕರಿಸಲಾಗಿದೆ. ಇನ್ನು ಜಿಲ್ಲೆಗೆ 250 ಟವರ್‌ಗಳ ಅಗತ್ಯ ಇದೆ ಎಂದು ತಿಳಿಸಿದರು. ಕಟಪಾಡಿ ಯಲ್ಲಿ ಈಗ ಇರುವುದು ಕೇವಲ ಒಂದು ಟವರ್ ಅಲ್ಲಿಗೆ ಎರಡು ಟವರ್ ಬೇಕು. ಈಗ ಟವರ್ 4ಜಿಗೆ ಉನ್ನತಿಕರಣ ಆಗಿಲ್ಲ ಎಂದರು. ಈಗಾಗಲೇ 80 ಟವರ್‌ಗಳಿಗೆ 46 ಹೊಸ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ಉಳಿದವುಗಳಿಗೆ ಕೂಡಲೇ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಮಣಿಪಾಲ ಆಸ್ಪತ್ರೆ ಸ್ಪಂದಿಸುತ್ತಿಲ್ಲ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಶಿಫಾರಸ್ಸು ಆದಂತಹ ರೋಗಿಗಳಿಗೆ ಚಿಕಿತ್ಸಾ ನೆರವು ದೊರಕುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಯೋಜನೆಯಡಿ ರೋಗಿಗಳಿಗೆ ಅಗತ್ಯ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಲು ಕೋ- ಆರ್ಡಿನೇಟರ್ ಗಳನ್ನು ಸಹ ನೇಮಕ ಮಾಡಿದ್ದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆಸ್ಪತ್ರೆಯಿಂದ ರೆಫರಲ್ ಮಾಡಿದಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ಮಣಿಪಾಲ ಆಸ್ಪತ್ರೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ರಾಜ್ಯದ ನಿರ್ದೇಶಕರಿಗೆ ಪತ್ರ ಬರೆಯುವಂತೆ ಸೂಚನೆ ನೀಡಿದ ಸಂಸದರು, ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ನ್ನೊಳಗೊಂಡಂತೆ ವಾರದ ಒಳಗಾಗಿ ಸಭೆ ಕರೆಯಬೇಕು ಎಂದರು.
ಬ್ರಹ್ಮಾವರ ತಾಲೂಕಿನಲ್ಲಿ ಇ.ಎಸ್.ಐ ಆಸ್ಪತ್ರೆಗೆ 2.5 ಕೋಟಿ ರೂ. ಮಂಜೂರಾಗಿದೆ. ಇದರ ಅನುಷ್ಠಾನ ತ್ವರಿತಗತಿಯಲ್ಲಿ ಆಗುವುದರೊಂದಿಗೆ ಫಲಾನುಭವಿಗಳಿಗೆ ಇದರ ಲಾಭ ದೊರಕಬೇಕು ಎಂದ ಅವರು, ಇದರ ಪ್ರಗತಿಗೆ ಸಂಬಂಧಿಸಿದ ಉತ್ತರ ಕೊಡಲು ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ತಕ್ತಪಡಿಸಿದ ಅವರು, ಕಾರಣ ಕೇಳಿ ನೋಟೀಸ್ ನೀಡುವಂತೆ ಸೂಚನೆ ನೀಡಿದರು.
ರೈಲ್ವೆ ರಸ್ತೆಗೆ ಭೂಸ್ವಾಧೀನ: ಕೊಂಕಣ ರೈಲ್ವೆಗೆ ನೀರು ಸರಬರಾಜು ಮಾಡುವ ಕಾಮಗಾರಿಯನ್ನು ಆದ್ಯತೆಯ ಮೇಲೆ ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ಈಗಾಗಲೇ ನಗರಸಭೆ ವತಿಯಿಂದ ರೈಲ್ವೆ ನಿಲ್ದಾಣ ಹಾಗೂ ವಸತಿ ಗೃಹಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ರೈಲಿಗಳಿಗೆ ನೀರನ್ನು ಒದಗಿಸಲು ನೀರಿನ ಮೂಲವನ್ನು ಗುರುತಿಸುವುದರೊಂದಿಗೆ ಕಾಮಗಾರಿ ಕೈಗೊಳ್ಳಬೇಕು ಎಂದು ಕೋಟ ಹೇಳಿದರು.
ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿಲ್ಲದೇ ಮಳೆಗಾಲದಲ್ಲಿ ವಾಹನಗಳ ನಿಲುಗಡೆಗೆ ತೊಂದರೆ ಉಂಟಾಗುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ರೈಲ್ವೆ ನಿಲ್ದಾಣದ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಕೈಗೊಳ್ಳಲು ಪ್ರಸ್ತಾವನೆಯನ್ನು ಕಳುಹಿಸಿ ಕೊಡಬೇಕು ಎಂದು ಸಂಸದರು ತಿಳಿಸಿದರು.
ಗ್ಯಾಸ್ ಸಂಪರ್ಕ ಕಾಮಗಾರಿ: ಅದಾನಿ ಕಂಪೆನಿ ನಡೆಸುತ್ತಿರುವ ಮನೆ ಮನೆಗೆ ಎಲ್‌ಪಿಜಿ ಗ್ಯಾಸ್ ಸಂಪರ್ಕ ಕಾಮಗಾರಿ 10 ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ ಆಕ್ರೋಶ ವ್ಯಕ್ತಪಡಿಸಿದ ಸಂಸದರು, ಮುಂದಿನ ಜೂನ್ ತಿಂಗಳ ಒಳಗಾಗಿ ಪೈಪ್‌ಲೈನ್ ಕಾಮಗಾರಿ ಮುಗಿಸುವುದರೊಂದಿಗೆ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಹಲವು ಮಂದಿ ಜೀವ ಕಳೆದುಕೊಂಡಿ ದ್ದಾರೆ. ವಾಹನ ವೇಗಕ್ಕೆ ತಡೆಯೊಡ್ಡಲು ವೇಗ ತಡೆಯನ್ನು ರಾ.ಹೆದ್ದಾರಿಯಲ್ಲಿ ಅಳವಡಿಸಬೇಕು. ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರುಗಳಾದ ಯಶ್ಪಾಲ್ ಎ.ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ವೈಲ್ಡ್‌ಲೈಫ್ ಡಿ.ಎಫ್.ಓ ಶಿವರಾಮ್ ಎಂ.ಬಾಬು, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಡಿಸಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ: ಕೋಟ
ಕುಸುಮ್- ಸಿ ಯೋಜನೆಯ ಅನುಷ್ಠಾನಕ್ಕೆ ಡೀಮ್ ಫಾರೆಸ್ಟ್ ಅಡ್ಡಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಸಂಸದರು, ಈ ಸಮಸ್ಯೆ ಬಗೆಹರಿಯದಿದ್ದರೆ ನಾನು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಯೋಜನೆ ಹಾದು ಹೋಗುವ ಜಿಲ್ಲೆಯ ಮೂರು ಕಡೆ ಡೀಮ್ಡ್ ಫಾರೆಸ್ಟ್ ಬರುವುದರಿಂದ ಮರಗಳನ್ನು ಕಡಿಯಲು ಅವಕಾಶ ಇಲ್ಲ ಎಂದು ಡಿಎಫ್‌ಓ ರುಥ್ರೇನ್ ಪಿ. ತಿಳಿಸಿದರು. ಆದರೆ ಕಂದಾಯ ಅಧಿಕಾರಿಗಳು ಇದು ಡೀಮ್ಡ್ ಫಾರೆಸ್ಟ್ ಅಲ್ಲ ಎಂಬುದಾಗಿ ತಿಳಿಸಿದರು. ಇದರಿಂದ ಚರ್ಚೆಗಳು ನಡೆದವು. ಅಗತ್ಯವಿರುವ ಭೂಮಿಯ ಸಮಸ್ಯೆ ಯನ್ನು ಕೂಡಲೇ ಬಗೆಹರಿಸುವಂತೆ ಸಂಸದರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲದಿದ್ದರೆ ಈ ಯೋಜನೆಯ 20ಕೋಟಿ ರೂ. ಅನುದಾನ ವಾಪಾಸ್ಸು ಹೋಗುವ ಸಾಧ್ಯತೆ ಇದೆ ಎಂದರು.






