ಉಡುಪಿ ಪೊಲೀಸ್‌ರಿಂದ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ಪ್ರಾರಂಭ

ಉಡುಪಿ, ಮೇ 7: ಜಿಲ್ಲೆಯ ನಾಗರಿಕರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ತಮ್ಮ ಮನೆಗೆ ಬೀಗ ಹಾಕಿ (ಲಾಕ್ ಮಾಡಿ) ಹೊರಗೆ ಹೋದಾಗ, ಅಂತಹ ಮನೆಗಳ ಮೇಲೆ ನಿಗಾ ಇಡಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (ಎಲ್‌ಎಚ್‌ಬಿಎಸ್) ಎಂಬ ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಈ ನೂತನ ಯೋಜನೆಯಲ್ಲಿ ‘ಲಾಕ್’ ಆಗಿರುವ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ‘ಹದ್ದಿನ ಕಣ್ಣು’ ಇರಿಸಲಿ ದ್ದಾರೆ. ಇಂಥ ‘ಬೀಗ ಹಾಕಿದ’ ಮನೆ ಇರುವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯಾ ಠಾಣಾ ಬೀಟ್ ಸಿಬ್ಬಂದಿ ಆ ಮನೆಗೆ ಭೇಟಿ ನೀಡಿ ರಾತ್ರಿ ಮತ್ತು ಹಗಲು ವೇಳೆ ಆ ಮನೆಯ ಸೂಕ್ತ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತಾರೆ.
ಉಡುಪಿ ಜಿಲ್ಲೆಯ ಯಾವುದೇ ಸಾರ್ವಜನಿಕರು ತಾವು ಮನೆಯಿಂದ ಪ್ರವಾಸ ಮತ್ತು ಇತರೇ ಕಾರ್ಯಕ್ರಮಗಳಿಗಾಗಿ ಮನೆಯನ್ನು ಲಾಕ್ ಮಾಡಿ ಹೊರಡುವಾಗ ಉಡುಪಿ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಈ ಬಗ್ಗೆ ನೀಡಲಾದ ವಿಶೇಷ ದೂರವಾಣಿ ಸಂಖ್ಯೆ: 0820-2526709ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡಬೇಕು. ನಿಯಂತ್ರಣ ಕೊಠಡಿಯಿಂದ ನೀಡುವ ವಾಟ್ಸಾಪ್ ಸಂಖ್ಯೆಗೆ ಮನೆಯಿಂದ ತೆರಳುವ ಮತ್ತು ಮರಳಿ ಬರುವ ದಿನಾಂಕ ಹಾಗೂ ಸಮಯ, ಮನೆಯ ನಿಖರವಾದ ವಿಳಾಸ ಹಾಗೂ ಮನೆಯ ಮುಂಭಾಗ ನಿಂತು ತೆಗೆದ ಒಂದು ಸೆಲ್ಫಿ ಫೋಟೋವನ್ನು ನೀಡಬೇಕಾಗಿದೆ ಎಂದು ಜಿಲ್ಲಾ ಪೊಲೀಸರ ಪ್ರಕಟಣೆ ತಿಳಿಸಿದೆ.
ಅನಂತರ ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಈ ಬಗ್ಗೆ ಸಂಬಂಧಿತ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಆ ಮನೆಯ ವ್ಯಾಪ್ತಿಯ ಬೀಟ್ ಸಿಬ್ಬಂದಿಗಳಿಗೆ ಮನೆಯ ‘ಮಾಹಿತಿ’ಯನ್ನು ನೀಡಲಾಗುವುದು. ಬಳಿಕ ಈ ಮನೆಯನ್ನು ವಾಟ್ಸಾಪ್ ವಿವರದಲ್ಲಿ ನೀಡಲಾದ ನಿಗದಿತ ದಿನಾಂಕ ಮತ್ತು ಸಮಯದವರೆಗೆ ಆ ಮನೆಯ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತ ಪಡಿಸುತ್ತಾರೆ.
ಈ ಸೌಲಭ್ಯವು ಕೇವಲ ಸ್ವಂತ/ವೈಯಕ್ತಿಕ ಮನೆಗಳಿಗೆ ಮಾತ್ರ ಲಭ್ಯವಿರಲಿದೆ. ಬಹುಮಹಡಿ ಫ್ಲಾಟ್‌ಗಳಿಗೆ ಇದು ಅನ್ವಯಿಸುವುದಿಲ್ಲ. ಯಾವುದೇ ಅಧಿಕೃತವಲ್ಲದ ಅಥವಾ ಅಪರಿಚಿತ ಸಂಖ್ಯೆಗಳೊಂದಿಗೆ ನಿಮ್ಮ ಮನೆಯ ಯಾವುದೇ ವಿವರ ಹಾಗೂ ಮಾಹಿತಿಯನ್ನು ಹಂಚಿಕೊಳ್ಳದಂತೆ ಜಿಲ್ಲಾ ಪೊಲೀಸರು ಜನತೆಯಲ್ಲಿ ಮನವಿ ಮಾಡಿದ್ದಾರೆ.






