ಉಡುಪಿ: ಶೋಕಮಾತಾ ಚರ್ಚಿನ ನೂತನ ಧರ್ಮಗುರುಗಳಾಗಿ ವಂ.ಡೆನಿಸ್ ಡೆಸಾ ಅಧಿಕಾರ ಸ್ವೀಕಾರ

ಉಡುಪಿ, ಮೇ 7: ನಗರದ ಪ್ರತಿಷ್ಠಿತ ಶೋಕಮಾತಾ ಚರ್ಚಿನ ನೂತನ ಧರ್ಮಗುರುಗಳಾಗಿ ವಂ. ಡೆನಿಸ್ ಡೆಸಾ ಗುರುವಾರ ಅಧಿಕಾರ ಸ್ವೀಕರಿಸಿದರು.
ತೊಟ್ಟಂ ಸಂತ ಅನ್ನಮ್ಮ ಚರ್ಚಿನಿಂದ ವರ್ಗಾವಣೆಗೊಂಡು ಉಡುಪಿ ಚರ್ಚಿಗೆ ಆಗಮಿಸಿದ ನೂತನ ಧರ್ಮಗುರು ಗಳನ್ನು ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಉಪಾಧ್ಯಕ್ಷರಾದ ಮ್ಯಾಕ್ಷಿಮ್ ಡಿಸೋಜಾ ಆತ್ಮೀಯವಾಗಿ ಸ್ವಾಗತಿಸಿದರು.
ಚರ್ಚಿನಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದ ನೇತೃತ್ವವನ್ನು ಧರ್ಮಾಧ್ಯಕ್ಷರ ಪ್ರತಿನಿಧಿಯಾಗಿ ಕುಲಪತಿ ಗಳಾದ ವಂ.ಸ್ಟೀವನ್ ಡಿಸೋಜಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ಚರ್ಚಿನ ವಂ.ಜೆ.ಬಿ.ಸಲ್ಡಾನಾ, ಶೋಕಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ. ಲಿಯೋ ಪ್ರವೀಣ್ ಡಿಸೋಜಾ, ಸಂತ ಮೇರಿ ಶಾಲೆಗಳ ಪ್ರಾಂಶುಪಾಲರಾದ ವಂ. ವಿಜಯ್ ಡಿಸೋಜಾ, ಮೂಡು ಬೆಳ್ಳೆ ಚರ್ಚಿನ ವಂ. ಜೋರ್ಜ್ ಡಿಸೋಜಾ, ವಂ. ಸ್ಟೀಫನ್ ರೊಡ್ರಿಗಸ್, ಉದ್ಯಾವರ ಚರ್ಚಿನ ವಂ. ಅನಿಲ್ ಡಿಸೋಜಾ, ತೊಟ್ಟಂ ಚರ್ಚಿನ ವಂ. ಹೆನ್ರಿ ಮಸ್ಕರೇನ್ಹಸ್, ನಿವೃತ್ತ ಧರ್ಮಗುರು ವಂ.ವಿಲಿಯಂ ಮಾರ್ಟಿಸ್, ಉಜ್ವಾಡ್ ಪತ್ರಿಕೆಯ ಸಂಪಾದಕರಾದ ವಂ. ಆಲ್ವಿನ್ ಉಪಸ್ಥಿತರಿದ್ದರು.
ಉಡುಪಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆಯಲ್ಲಿದ್ದ ವಂ. ಚಾರ್ಲ್ಸ್ ಮಿನೇಜಸ್ ಅವರನ್ನು ಶಿರ್ವ ಆರೋಗ್ಯ ಮಾತಾ ದೇವಾಲಯದ ಧರ್ಮಗುರುಗಳಾಗಿ ವರ್ಗಾವಣೆ ಮಾಡಲಾಗಿದೆ.






