ಸಂಸದ ಕೋಟ ನೇತೃತ್ವದಲ್ಲಿ ಗೋಡಂಬಿ ಉದ್ಯಮಿಗಳಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿ; ಮನವಿ

ಉಡುಪಿ, ಮೇ 7: ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವ ದಲ್ಲಿ ಅಖಿಲ ಭಾರತ ಗೋಡಂಬಿ ಉದ್ಯಮ ಸಂಘದ ಅಧ್ಯಕ್ಷ ಬೋಳ ರಾಹುಲ್ ಕಾಮತ್ ಮತ್ತು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರನ್ನೊಳಗೊಂಡ ನಿಯೋಗವೊಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಗೋಡಂಬಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಅರ್ಪಿಸಿತು
ದೇಶದಲ್ಲಿ ಗೋಡಂಬಿ ಉದ್ಯಮದ ಹಿತಾಸಕ್ತಿ ಕಾಪಾಡುವುದರಿಂದ ಗೇರುಬೀಜದ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ಬದುಕು ಕಟ್ಟಿಕೊಡಲು ಸಾಧ್ಯವಿದೆ. ಆರ್ಥಿಕ ಹಾಗೂ ತೋಟಗಾರಿಕಾ ಕ್ಷೇತ್ರ ಅಭಿವೃದ್ಧಿ ಗೊಳ್ಳಲಿದೆ ಎಂದು ಕೇಂದ್ರ ಸಚಿವರಿಗೆ ನಿಯೋಗ ವಿವರಿಸಿತು.
ಭಾರತದ ಮಾರುಕಟ್ಟೆಗೆ ಹೊರದೇಶಗಳ ಗೋಡಂಬಿ ಆಮದಿನ ಹೆಸರಿನಲ್ಲಿ ಸುಂಕ ಕಡಿತಗೊಳಿಸುವಿಕೆ, ನಿಯಮ ರಹಿತವಾಗಿ ಗೋಡಂಬಿ ಸಾಗಾಟ, ಭಾರತ ಸೇರಿ ಅನ್ಯ ರಾಷ್ಟ್ರಗಳಲ್ಲಿ ತಿರಸ್ಕರಿಸಲ್ಪಟ್ಟ ಕಳಪೆ ಗುಣಮಟ್ಟದ ನುಚ್ಚು ಗೋಡಂಬಿಗಳನ್ನು ಪಶು ಆಹಾರ ಉತ್ಪಾದಿಸುವಿಕೆ ಹೆಸರಲ್ಲಿ ಸುಂಕ ವಿನಾಯಿತಿಯೊಂದಿಗೆ ಖರೀದಿಸಿ ಮಾರುಕಟ್ಟೆ ಯಲ್ಲಿ ಉತ್ಪಾದಿತ ಗೋಡಂಬಿಗೆ ಸಮನಾಗಿ ಮಾರಾಟ ಮಾಡಿ ನೈಜ ಉದ್ಯಮಕ್ಕೆ ಬೀಳುವ ಹೊಡೆತಗಳ ಬಗ್ಗೆ ನಿಯೋಗವು ಸಚಿವರಿಗೆ ವಿಷದವಾಗಿ ವಿವರಿಸಿತು.
ಕೆಲವೆಡೆ ನೈಜ ಗೋಡಂಬಿಯನ್ನು ಹುರಿದ ಗೋಡಂಬಿ ಎಂದು ಘೋಷಿಸಿ, ದರದ ವ್ಯತ್ಯಯ ಮತ್ತು ಸಂಶೋಧನಾ ಸಂಸ್ಥೆಗಳ ತಪಾಸಣೆಯಿಂದ ಉದ್ಯಮದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದ್ದು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಉದ್ಯಮವನ್ನು ಉಳಿಸಿ ಬೆಳೆಸಲು ಸಹಕರಿಸಬೇಕೆಂದು ನಿಯೋಗ ಸಚಿವರಲ್ಲಿ ವಿನಂತಿಸಿತು.
ಸುದೀರ್ಘ ಚರ್ಚೆಯ ನಂತರ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಇನ್ನು ಮುಂದೆ ಅಕ್ರಮ ಗೋಡಂಬಿ ಆಮದಿನ ಬಗ್ಗೆ ಕಟ್ಟುನಿಟ್ಟಾಗಿ ಮಾರ್ಗಸೂಚಿ ರಚಿಸುವಂತೆ ಪಶು ಆಹಾರಕ್ಕೆ ಬಳಸುವ ಹೆಸರಲ್ಲಿ ಸುಂಕ ರಹಿತ ಗೋಡಂಬಿ ಆಮದನ್ನು ನಿಲ್ಲಿಸುವಂತೆ, ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಮೂಲಕ ಗುಣಮಟ್ಟವನ್ನು ತೀವ್ರ ಪರಿಶೀಲನೆ ಗೊಳಪಡಿಸುವಂತೆ ಸಚಿವ ಪಿಯೂಷ್ ಗೋಯಲ್ ನಿರ್ದೇಶಿಸಿದರು.
ಶಾಸಕ ಕಿರಣ್ ಕೊಡ್ಗಿ ಮಾತನಾಡಿ ಗೇರುಬೀಜ ಉದ್ಯಮ ಉಳಿದು ಬೆಳೆಯಲು ಸಹಾಯ ಮಾಡುತ್ತಿರುವ ಪ್ರಧಾನಿ ಮೋದಿ ಮತ್ತು ವಾಣಿಜ್ಯ ಕೈಗಾರಿಕಾ ಮಂತ್ರಿಗಳಿಗೆ ಕೃತಜ್ಞತೆ ತಿಳಿಸಿದರು. ಹೊಸದಿಲ್ಲಿಯ ಕೇಂದ್ರ ಸಚಿವರ ಕಚೇರಿ ಯಲ್ಲಿ ನಡೆದ ಸಭೆಯಲ್ಲಿ ಅಖಿಲ ಭಾರತ ಗೋಡಂಬಿ ಉದ್ಯಮ ಸಂಘದ ಕಾರ್ಯದರ್ಶಿ ಎಂ. ರಾಮಕೃಷ್ಣನ್, ಪ್ರಕಾಶ್ ಕಲ್ಬಾ, ತುಕಾರಾಂ ಪ್ರಭು, ಉಪೇಂದ್ರ ಕೆ., ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿತಿನ್ ಯಾದವ್, ಆರ್ಥಿಕ ಸಲಹೆಗಾರ್ತಿ ಪ್ರಿಯಾ ನಾಯರ್, ಹೆಚ್ಚುವರಿ ಡಿಜಿಎಫ್‌ಟಿ ರಾಕೇಶ್ ಕುಮಾರ್ ಉಪಸ್ಥಿತರಿದ್ದರು.






