ಅಡುಗೆ ಅನಿಲ ದರ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಉಡುಪಿ, ಮೇ 8: ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು ಏಕಾಏಕಿ 990 ರೂ.ಗಳಷ್ಟು ಏರಿಕೆ ಮಾಡಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಶುಕ್ರವಾರ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪಂಚರಾಜ್ಯಗಳ ಚುನಾವಣೆಯಲ್ಲಿ ಮತದಾನ ಮುಗಿಯುತಿದ್ದಂತೆ ಇರಾನ್- ಅಮೆರಿಕ ಯುದ್ಧದ ನೆಪದಲ್ಲಿ ಅಡುಗೆ ಅನಿಲದ ದರವನ್ನು ಏರಿಸುವ ಮೂಲಕ ಬಿಜೆಪಿ ಸರಕಾರ ಕೋಟ್ಯಾಂತರ ಭಾರತೀಯರ ಹಾಗೂ ಹೊಟೇಲ್ ಉದ್ಯಮಿಗಳ ಜೀವನವನ್ನು ಬೀದಿಗೆ ತಂದಿದೆ ಎಂದು ಆರೋಪಿಸಿ ಹಾಗೂ ಕೇಂದ್ರ ಸರಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್ ಮಾಲಕರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ತೊಂದರೆ ಆಗಿದೆ. ಉಡುಪಿಯಲ್ಲೇ ಸುಮಾರು 50ರಿಂದ 60ರಷ್ಟು ಸಣ್ಣಪುಟ್ಟ ಹೊಟೇಲ್‌ಗಳು ಬಾಗಿಲು ಮುಚ್ಚಿವೆ. ಅದನ್ನು ಅವಲಂಬಿಸಿದ್ದ ಕಾರ್ಮಿಕ ವರ್ಗ ಬೀದಿಗೆ ಬಿದ್ದಿದೆ ಎಂದು ಆರೋಪಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಣ್ಣ ಉದ್ದಿಮೆದಾರರ ಮೇಲೆ ಪ್ರಹಾರ ಮಾಡಿದ್ದಲ್ಲದೇ, ಈಗಾಗಲೇ ಬಡತನದಲ್ಲಿ ಬಸವಳಿದಿದ್ದ ಜನಸಾಮಾನ್ಯರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ದೇಶದಲ್ಲಿ ಅಘೋಷಿತ ಕರ್ಪ್ಯೂ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದರಲ್ಲದೇ, ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯ ಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸುರಯ್ಯಾ ಅಂಜುಮ್ ಮಾತನಾಡಿ, ನರೇಂದ್ರ ಮೋದಿ ಅವರು ಘೋಷಿಸಿದ ಅಚ್ಛೇದಿನ್ ಬಂದಿರುವುದು ಬಿಜೆಪಿಗೆ ಮತ್ತು ಅವರ ಕಾರ್ಪೋರೇಟ್ ಗೆಳೆಯರಿಗೆ ಮಾತ್ರ. ತನ್ನ ಅಂಧಭಕ್ತರ ಮೂಲಕ ಮೋದಿ ಅವರು ತನ್ನೆಲ್ಲಾ ಜನವಿರೋಧಿ ನೀತಿಗಳನ್ನು ಜನಪರ ಎಂಬಂತೆ ಬಿಂಬಿಸುತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರಿಪ್ರಸಾದ್ ರೈ, ಮಹಿಳಾ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಅಲೆವೂರು ಹರೀಶ್ ಕಿಣಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಶಬರೀಶ್ ಸುವರ್ಣ, ಸಜ್ಜನ್ ಶೆಟ್ಟಿ, ನವೀನ್ ಸಾಲ್ಯಾನ್, ಅಕ್ಷತ್ ಪೈ ಮೊದಲಾದವರು ಭಾಗವಹಿಸಿದ್ದರು.






