ಜಗತ್ತಿನ ಸೇವೆಯಲ್ಲಿ ರೆಡ್‌ಕ್ರಾಸ್ ಅನನ್ಯ: ಡಾ.ಅಶೋಕ್

ಉಡುಪಿ, ಮೇ 8: ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಕಳೆದ ಒಂದೂವರೆ ಶತಮಾನಗಳಿಂದ ಜಗತ್ತಿನ ವಿವಿದೆಡೆ ಮಾನವೀಯ ಸೇವೆಗಳಿಗೆ ಹೆಸರಾಗಿದೆ. ಪ್ರಾಕೃತಿಕ ವಿಕೋಪ ಮತ್ತು ಯುದ್ಧದ ಸಂದರ್ಭಗಳಲ್ಲಿ ಅದು ಸಲ್ಲಿಸಿದ ಸೇವೆ ಅನನ್ಯವಾದುದು ಎಂದು ಉಡುಪಿ ಜಿಲ್ಲಾ ರೆಡ್‌ಕ್ರಾಸ್‌ನ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಹೇಳಿದ್ದಾರೆ.
ಅಜ್ಜರಕಾಡಿನಲ್ಲಿರುವ ಜಿಲ್ಲಾ ರೆಡ್‌ಕ್ರಾಸ್ ಘಟಕದಲ್ಲಿ ರೆಡ್‌ಕ್ರಾಸ್ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭ ದಲ್ಲಿ ರೆಡ್‌ಕ್ರಾಸ್ ಸ್ಥಾಪಕ ಹೆನ್ರಿ ಡ್ಯುನಾಂಟ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು. ಈ ದೃಷ್ಟಿಯಿಂದ ರೆಡ್‌ಕ್ರಾಸ್ ಅರ್ಹವಾಗಿಯೇ ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಪಡೆದಿದೆ ಎಂದು ಅವರು ವಿವರಿಸಿದರು.
ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ, ರೆಡ್‌ಕ್ರಾಸ್ ನಡೆದುಬಂದ ದಾರಿಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಶ್ರವಣ ಸಾಧನ ಮತ್ತು ಗೃಹಪಯೋಗಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಹೈಕೋರ್ಟ್ ವಕೀಲ ಶ್ರೀಕಾಂತ್ ಶಂಕರನಾರಾಯಣ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜಯಶ್ರೀ, ರೆಡ್‌ಕ್ರಾಸ್, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಮತ್ತು ವಾರ್ತಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ರೆಡ್‌ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು.






