‘ಸುಶಿಕ್ಷಿತ ಜನಪ್ರತಿನಿಧಿಗಳಿಂದ ಮಾತ್ರ ಪರಿಸರದ ಪರ ಭರವಸೆ ಮೂಡಲು ಸಾಧ್ಯ’

ಉಡುಪಿ, ಮೇ 9: ಪರಿಸರ ಮಾರಕ ಯೋಜನೆಗಳ ವಿರುದ್ಧ ಈ ದೇಶದಲ್ಲಿ ಏನು ಮಾಡಲು ಆಗುವುದಿಲ್ಲ. ನಾವು ನಿಜವಾಗಲೂ ಸುಶಿಕ್ಷಿತ ಜನಪ್ರತಿನಿಧಿ ಗಳನ್ನು ಆಯ್ಕೆ ಮಾಡುವವರೆಗೆ ಇದು ಸಾಧ್ಯವಿಲ್ಲ. ಪದವಿ ಮುಖ್ಯವಲ್ಲದ ಸುಶಿಕ್ಷಿತ ಜನಪ್ರತಿನಿಧಿಗಳಿಂದ ಮಾತ್ರ ಭರವಸೆ ಮೂಡಲು ಸಾಧ್ಯ ಎಂದು ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ ಹೇಳಿದ್ದಾರೆ.
ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಪ್ರೊ.ಮಾಧವ ಗಾಡ್ಗೀಳ ನೆನಪಿನ ಪರಿಸರ ಮತ್ತು ಶಿಕ್ಷಣ ಸಮ್ಮೇಳನದ ಅಧಿವೇಶನದಲ್ಲಿ ಅವರು ‘ಕಾಡಿನ ಮಾತು ಕೇಳಿಸಿಕೊಳ್ಳುವ ಬಗ್ಗೆ’ ವಿಚಾರದ ಕುರಿತು ಮಾತನಾಡುತಿದ್ದರು.
ಈ ಹಿಂದೆ ನಮ್ಮ ದೇಶದ ಪ್ರಧಾನಿಯೊಬ್ಬರು ಭಾರತದ ಆನೆ ಮರಿಯನ್ನು ಇನ್ನೊಂದು ದೇಶಕ್ಕೆ ಕಳುಹಿಸಿಕೊ ಟ್ಟಿದ್ದರು. ಇದಕ್ಕೆ ಜನ ಕೊಂಡಾಡಿದರು. ಇದೊಂದು ದೊಡ್ಡ ಅಪರಾಧ. ಒಂದು ಜೀವಿಯ ಬದುಕು ಸ್ವಭಾವ ಅರ್ಥವಾಗದಿದ್ದರೆ ಇಂತಹ ದುರಂತ ನಡೆಯುತ್ತಲೇ ಇರುತ್ತದೆ. ಅದಕ್ಕೆ ನಾವೆಲ್ಲ ಚಪ್ಪಾಳೆ ತಟ್ಟುತ್ತಲೇ ಇರುತ್ತೇವೆ. ಹಕ್ಕಿಯ ಹಾಡು ಕೇಳದೇ ಇರುವವರಿಗೆ ಅದರ ನೋವು ತಲುಪಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಮಕ್ಕಳಿಗೆ ಪರಿಸರ ಪಠ್ಯಗಿಂತ ಸುತ್ತಮುತ್ತಲಿನ ಪರಿಸರದಲ್ಲಿರುವ ಮರ ಗಿಡಗಳ ಬಳಿ ಕರೆದುಕೊಂಡು ಹೋಗಿ ನೀಡುವ ಮಾಹಿತಿ ಹೆಚ್ಚು ಪರಿಣಾಮ ಕಾರಿಯಾಗಿರುತ್ತದೆ. ಅದು ಮಕ್ಕಳಲ್ಲಿ ದೀರ್ಘಕಾಲ ಉಳಿಯುತ್ತದೆ. ಪರಿಸರ ಪರಿಚಯ ಮಾಡಿದರೆ ಸಾಕು. ಮತ್ತೆ ಕ್ರಮೇಣ ಅವರಲ್ಲಿ ಅದರ ಬಗ್ಗೆ ಪ್ರೀತಿ ಬೆಳೆಯುತ್ತದೆ ಎಂದು ಅವರು ತಿಳಿಸಿದರು.
ಇವತ್ತು ಹೆಚ್ಚಿನ ಶಾಲೆಗಳು ಪ್ಲಾಸ್ಟಿಕ್ ಶಾಲೆಗಳಾಗಿವೆ. ಮಕ್ಕಳಿಗೆ ಉತ್ತರ ಬರೆಯಲು ಮಾತ್ರ ಪಾಠ ಮಾಡುವರು ಶಿಕ್ಷಕರು ಆಗುವುದಿಲ್ಲ. ಮಕ್ಕಳಲ್ಲಿ ಇತರ ವಿಚಾರಗಳ ಬಗ್ಗೆಯೂ ಕುತೂಹಲ ಮೂಡಿಸುವುದರ ಜೊತೆಗೆ ಪ್ರಚೋದನೆ ಕೂಡ ಕೊಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಮೊಬೈಲ್ ಫೋಟೋಗ್ರಾಫಿ ಎಂಬುದು ಕೇವಲ ಒಂದು ಫೇಸ್ ಅಷ್ಟೇ. ಅದೆಲ್ಲವೂ ಕ್ಷಣಿಕವಾಗಿರುವ ಸಾಮಾಜಿಕ ಜಾಲ ತಾಣಗಳ ಲೈಕ್‌ಗೆ ಸೀಮಿತವಾಗಿದೆ. ಇದೆಲ್ಲವೂ ಕೆಲವೇ ವರ್ಷಗಳಲ್ಲಿ ಮಾಯವಾಗುತ್ತದೆ. ಎಷ್ಟು ವೇಗದಲ್ಲಿ ಬರುತ್ತದೆಯೋ ಅಷ್ಟೇ ವೇಗದಲ್ಲಿ ಮರೆಯಾಗುತ್ತದೆ. ಈ ಪ್ರಪಂಚದಿಂದ ಮಕ್ಕಳನ್ನು ದಾಟಿಸಬೇಕಾಗಿದೆ. ವರ್ಚವಲ್ ಪ್ರಪಂಚದ ಬದಲು ನಿಜವಾದ ಪ್ರಪಂಚ ತೋರಿಸುವ ಕಾರ್ಯ ಮಾಡಬೇಕು ಎಂದು ಸೇನಾನಿ ಹೇಳಿದರು.
ಬಳಿಕ ಕೃಪಾಕರ ಸೇನಾನಿ ಅವರೊಂದಿಗೆ ಸಂವಾದ ನಡೆಯಿತು. ಸಾಹಿತಿ ಅಭಿಲಾಷ ಎಸ್. ಕಾರ್ಯಕ್ರಮ ನಿರ್ವಹಿಸಿದರು.
‘ಅಭಿವೃದ್ಧಿಯಿಂದ ಜೀವಿಗಳ ಸಂವಹನಕ್ಕೆ ಕತ್ತರಿ’
ರಸ್ತೆ, ಅಣೆಕಟ್ಟು ನಿರ್ಮಾಣದಿಂದ ಕಾಡುಗಳು ಇಂದು ಚೂರು ಚೂರು ಆಗಿ ಸಂಪರ್ಕಗಳನ್ನೇ ಕಡಿದುಕೊಳ್ಳುತ್ತಿದೆ. ಇದು ಪರಿಸರಕ್ಕೆ ಆಗುತ್ತಿರುವ ಬಹಳ ದೊಡ್ಡ ತೊಂದರೆಯಾಗಿದೆ. ಇದರ ಪರಿಣಾಮ ಕಪ್ಪೆ ಸೇರಿದಂತೆ ವಿವಿಧ ಜೀವಿಗಳು ಶಬ್ದಗಳ ಮೂಲಕ ನಡೆಸುವ ಸಂವಹನಕ್ಕೆ ಕತ್ತರಿ ಬೀಳುತ್ತಿದೆ. ಹೀಗೆ ಅಭಿವೃದ್ಧಿ ಕಾಮಗಾರಿಗಳು ಅರಣ್ಯ, ಅದರಲ್ಲಿ ಜೀವಿಗಳಿಗೆ ಮಾರಕ ವಾಗಿ ಪರಿಣಮಿಸುತ್ತಿದೆ ಎಂದು ಸೇನಾನಿ ತಿಳಿಸಿದರು.
ಈ ವಿಶ್ವದಲ್ಲಿ ಮನುಷ್ಯ ಕೇವಲ 3ಲಕ್ಷ ವರ್ಷಗಳಿಂದ ಮಾತ್ರ ಇದ್ದಾನೆ. ಹಾಗಾಗಿ ನಾವು ಇನ್ನು ಯಶಸ್ವಿ ಜೀವಿ ಅಲ್ಲ. 80ಲಕ್ಷ ಜೀವಿಗಳಲ್ಲಿ ಮನುಷ್ಯ ಕೂಡ ಒಂದು. 80ಲಕ್ಷ ಜೀವಿಗಳಲ್ಲಿ ಎಷ್ಟೋ ಜೀವಿಗಳು ಕೋಟ್ಯಂತರ ವರ್ಷ ಬದುಕಿವೆ. ನಾವು ಈಗ ಈ ಯುದ್ಧದ ಮೂಲಕ ನಮ್ಮನ್ನೇ ನಾಶ ಮಾಡುತ್ತಿದ್ದೇವೆ. ಹೀಗಾದರೆ ಮುಂದೆ ಪ್ರಕೃತಿಗೆ ಲಾಭ ಆಗಬಹುದು ಎಂದು ಅವರು ಹೇಳಿದರು.






