ಹಸ್ತಪ್ರತಿಗಳ ಡಿಜಿಟಲೀಕರಣ ಚುರುಕುಗೊಳಿಸಿ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

ಉಡುಪಿ: ಜ್ಞಾನ ಭಾರತಂ ಮಿಷನ್ ಯೋಜನೆಯಡಿ ದೇಶದಲ್ಲಿ ಶತಮಾನಗಳಷ್ಟು ಹಳೆಯ ಕೈ ಬರಹಗಳು, ಹಸ್ತಪ್ರತಿಗಳು ಹಾಗೂ ಇತರ ದಾಖಲೆಗಳನ್ನು ತಂತ್ರಜ್ಞಾನದ ಮೂಲಕ ಶಾಶ್ವತವಾಗಿ ಉಳಿಸುವ ಡಿಜಿಟಲೀಕರಣ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಜಿಲ್ಲೆಯ ಎಲ್ಲರೂ ಸಹಕಾರ ನೀಡಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕರೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿಯಲ್ಲಿ ರಾಷ್ಟ್ರದಾದ್ಯಂತ ಲಭ್ಯವಿರುವ ಶತಮಾನ ಗಳಷ್ಟು ಹಳೆಯ ಕೈಬರಹದ ಪಠ್ಯ ಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಿ, ಇಂದಿನ ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸಲು ಅವುಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ತಮ್ಮಲ್ಲಿ ಇಂತಹ ಹಳೆಯ ಕೈಬರಹ, ಹಸ್ತಪ್ರತಿ, ದಾಖಲೆಗಳು ಲಭ್ಯವಿದ್ದಲ್ಲಿ ನೇರವಾಗಿ ಜ್ಞಾನ ಭಾರತಂ ಆ್ಯಪ್ ಮೂಲಕ ಅವುಗಳನ್ನು ಅಪ್ಲೋಡ್ ಮಾಡಬಹುದು ಅಥವಾ ಮಾಹಿತಿ ನೀಡಿದಲ್ಲಿ ಸಮೀಕ್ಷೆದಾರರು ತಮ್ಮಲ್ಲಿಗೆ ಬಂದು ದಾಖಲಿ ಸಿಕೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.
ಐತಿಹಾಸಿಕ ದಾಖಲೆಗಳ ಸಮೀಕ್ಷೆ, ಸಂರಕ್ಷಣೆ, ರಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ, ಅನುವಾದ ಮತ್ತು ಪ್ರಕಟಣೆಯನ್ನು ಮಾಡುವ ಮೂಲಕ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತದೆ. ಭವಿಷ್ಯದ ಪೀಳಿಗೆಗೆ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆಗೆ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ಡಿಜಿಟಲೀಕರಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾದಿಕಾರಿ ತಿಳಿಸಿದರು.
ಜಿಲ್ಲೆಯ ಎಲ್ಲಾ ವಿಶ್ವವಿದ್ಯಾಲಯಗಳು, ವಸ್ತುಸಂಗ್ರಹಾಲಯಗಳು, ಸಂಘ -ಸಂಸ್ಥೆಗಳು, ಮಠಗಳು ಮತ್ತು ವ್ಯಕ್ತಿಗಳ ಬಳಿ ಇರುವಂತಹ ಹಸ್ತಪ್ರತಿಗಳನ್ನು ದಾಖಲೀಕರಣಗೊಳಿಸಬೇಕಾಗಿದ್ದು, ಈ ಮಹತ್ವದ ಕಾರ್ಯಕ್ಕೆ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸಂಶೋಧನಾ ಕೇಂದ್ರಗಳು, ಸಂಘ, ಸಂಸ್ಥೆಗಳು, ಮಠಗಳು ಮತ್ತು ದಾಖಲೆ ಹೊಂದಿರುವ ವ್ಯಕ್ತಿ, ಕುಟುಂಬಗಳು ಜಿಲ್ಲಾಡಳಿತ ದೊಂದಿಗೆ ಕೈ ಜೋಡಿಸುವ ಅಗತ್ಯವಿದ್ದು, ಪ್ರತಿಯೊಬ್ಬರೂ ಸಹಕಾರ ನೀಡಬೇ ಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಹಸ್ತಪ್ರತಿಗಳ ಡಿಜಿಟಲೀಕರಣ ಕೈಗೊಂಡಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದ ಅವರು, ಹಸ್ತಪ್ರತಿಗಳು ಇರುವ ಬಗ್ಗೆ ನಿಖರವಾದ ಮಾಹಿತಿ ಗಳನ್ನು ಕಲೆ ಹಾಕಬೇಕು. ಈ ಸಂಬಂಧ ವಿವಿಧ ಸಮುದಾಯ, ಅರ್ಚಕರು, ತಂತ್ರಿಗಳು ಸೇರಿದಂತೆ ಇತರರ ಸಭೆಯನ್ನು ಕರೆಯಬೇಕು ಎಂದು ಹೇಳಿದರು.
ಇದೇ ಸಂದರ್ಭ ಜ್ಞಾನ ಭಾರತಂ ಮಿಷನ್ ಯೋಜನೆಯ ಪ್ರಚಾರದ ಪೋಸ್ಟರ್‌ನ್ನು ಸ್ವರೂಪಾ ಟಿ.ಕೆ. ಬಿಡುಗಡೆ ಗೊಳಿಸಿದರು. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್. ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಯುಕ್ತ ಮಹಾಂತೇಶ್ ಹಂಗರಗಿ, ವಾರ್ತಾಧಿ ಕಾರಿ ಮಂಜುನಾಥ್ ಬಿ, ಜ್ಞಾನ ಭಾರತಂ ಉಡುಪಿ ಜಿಲ್ಲಾ ಮಟ್ಟದ ಸಂಯೋಜಕ ಡಾ. ಗೋಪಾಲಾಚಾರ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಧನಲಕ್ಷ್ಮೀ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಡಾ.ಬಿ ಜಗದೀಶ್ ಶೆಟ್ಟಿ, ಹಾಗೂ ಇತರರು ಉಪಸ್ಥಿತರಿದ್ದರು.






