ಕೋಡಿ ಬ್ಯಾರೀಸ್‌ನಲ್ಲಿ ಲೈಂಗಿಕ ಕಿರುಕುಳ ಜಾಗೃತಿ ಕಾರ್ಯಾಗಾರ

ಕುಂದಾಪುರ, ಮೇ 12: ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಮತ್ತು ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ’ಮಹಿಳಾ ಕಿರುಕುಳ ವಿರೋಧಿ ಘಟಕ’ದ ವತಿಯಿಂದ ಲೈಂಗಿಕ ಕಿರುಕುಳ ಜಾಗೃತಿ ಕಾರ್ಯಾಗಾರವು ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಎನ್‌ಎಸ್‌ಡಿಸಿ ಮಾನ್ಯತೆ ಪಡೆದ ಮತ್ತು ಸರ್ಟಿಫೈಡ್ ಪಿಓಎಸ್‌ಎಚ್ ತರಬೇತುದಾರ ಹಾಗೂ ಬ್ಯಾರೀಸ್ ಗ್ರೂಪ್‌ನ ಎಚ್.ಆರ್. ಮ್ಯಾನೇಜರ್ ಅಬ್ದುಲ್ ರಜಾಕ್ ಎನ್. ಲೈಂಗಿಕ ಕಿರುಕುಳದ ಸ್ವರೂಪ ಮತ್ತು ಅದರ ವಿರುದ್ಧದ ಕಾನೂನು ಹೋರಾಟದ ಬಗ್ಗೆ ಮಾಹಿತಿ ನೀಡಿದರು.
ಸಮಾಜದಲ್ಲಿ ಸಾರ್ವಜನಿಕವಾಗಿ ನಡೆಯುವ ದೌರ್ಜನ್ಯಗಳು ಭಾರತೀಯ ನ್ಯಾಯ ಸಂಹಿತೆಯ ವ್ಯಾಪ್ತಿಗೆ ಬರುತ್ತವೆ. ಆದರೆ ಶಿಕ್ಷಣ ಸಂಸ್ಥೆ ಅಥವಾ ಕೆಲಸದ ಸ್ಥಳಗಳಲ್ಲಿ ನಡೆಯುವ ಕಿರುಕುಳಗಳನ್ನು ತಡೆಯಲು ಪೋಶ್’ ಕಾಯ್ದೆ ಬಹಳ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಕಾನೂನುಗಳ ಅರಿವು ಹೊಂದಿರುವುದು ಅತ್ಯಗತ್ಯ. ಇಂದು ವಿದ್ಯಾರ್ಥಿಗಳಾ ಗಿರುವ ನೀವು ನಾಳೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿ ಅಥವಾ ಉದ್ಯಮಿಗಳಾಗಿ ಗುರುತಿಸಿಕೊಳ್ಳಲಿದ್ದೀರಿ. ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬರಿಗೂ ಗೌರವಯುತ ಹಾಗೂ ಸುರಕ್ಷಿತ ವಾತಾವರಣ ಸಿಗುವುದು ಅವರ ಹಕ್ಕಾಗಿದೆ. ಈ ನಿಟ್ಟಿನಲ್ಲಿ ಕಿರುಕುಳ ಎಂದರೇನು ಮತ್ತು ಅದನ್ನು ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬ ಬಗ್ಗೆ ಪ್ರಾಯೋಗಿಕ ಉದಾಹರಣೆಗಳೊಂದಿಗೆ ಅವರು ತಿಳಿಸಿಕೊಟ್ಟರು.
ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು ಮತ್ತು ಯಾವುದೇ ರೀತಿಯ ಕಿರುಕುಳ ನಡೆದಾಗ ಅದನ್ನು ಧೈರ್ಯವಾಗಿ ಎದುರಿಸ ಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ವಿದ್ಯಾರ್ಥಿ ಗಳು ಲೈಂಗಿಕ ಕಿರುಕುಳದಂತಹ ಗಂಭೀರ ವಿಷಯಗಳ ಬಗ್ಗೆ ಸರಿಯಾದ ತಿಳುವಳಿಕೆ ಪಡೆದು, ತಮ್ಮ ಮುಂದಿನ ಜೀವನದಲ್ಲಿ ಇಂತಹ ಸವಾಲುಗಳನ್ನು ಎದುರಿಸಲು ಇಲ್ಲಿ ನೀಡುವ ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಕ್ತ ಮತ್ತು ಸುರಕ್ಷಿತ ವಾತಾವರಣ ಒದಗಿಸುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಫಿರ್ದೋಸ್, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಪ್ರವೀಣ್ ಕುಮಾರ್ ಕೆ.ಪಿ., ಕಾರ್ಯಕ್ರಮದ ಸಂಯೋಜಕ ರಾದ ವಿನುತ, ಶಂಶಾದ್ ಉಪಸ್ಥಿತರಿದ್ದರು.
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲೆ ಆಫ್ರಿನ್ ಖಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ದರು. ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶ್ರುತಿ ವಂದಿಸಿದರು.






