ಜಾನುವಾರುಗಳ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆಯೊಂದೇ ಪರಿಹಾರ: ಉಡುಪಿ ಡಿಸಿ ಸ್ವರೂಪ ಟಿ.ಕೆ

ಉಡುಪಿ: ಜಾನುವಾರುಗಳಲ್ಲಿ ಅತ್ಯಂತ ವೇಗವಾಗಿ ಹರಡುವ ಕಾಲುಬಾಯಿ ರೋಗ, ಒಂದು ಸಾಂಕ್ರಾಮಿಕ ರೋಗವಾಗಿದ್ದು, ಈ ರೋಗದ ನಿಯಂತ್ರಣಕ್ಕೆ ಲಸಿಕೆಯೊಂದೇ ಪರಿಹಾರವಾಗಿದೆ. ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಒಂಭತ್ತನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ನೋಡಿಕೊಳ್ಳಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದ್ದಾರೆ.
ಬುಧವಾರ ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ 9 ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಒಂಭತ್ತನೇ ಸುತ್ತಿನ ಕಾಲು ಬಾಯಿ ಲಸಿಕಾ ಕಾರ್ಯಕ್ರಮ ಈಗಾಗಲೇ ಪ್ರಾರಂಭಗೊಂಡಿದ್ದು, ಮೇ 22ರವರೆಗೆ ಇದು ಮುಂದುವರಿ ಯಲಿದೆ. ಜಾನುವಾರುಗಳಿಗೆ ವೈರಾಣುವಿನಿಂದ ಹರಡುವ ಈ ರೋಗ ತಡೆಗೆ ಲಸಿಕೆಯೊಂದೇ ಪರಿಹಾರವಾಗಿದ್ದು, ರೈತರು ನಿರ್ಲಕ್ಷ್ಯ ಮಾಡದೇ ತಮ್ಮ ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಪಶು ವೈದ್ಯಾಧಿಕಾರಿ ಗಳು ನೋಡಿಕೊಳ್ಳಬೇಕು ಎಂದರು.
ಜಾನುವಾರುಗಳು ಒಂದೊಮ್ಮೆ ಈ ರೋಗಕ್ಕೆ ತುತ್ತಾದಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗುವುದರೊಂದಿಗೆ, ಜಾನುವಾರುಗಳ ಆರೋಗ್ಯ ಹದಗೆಡುತ್ತದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ಲಸಿಕಾ ಕಾರ್ಯಕ್ಕಾಗಿ ಮನೆಮನೆಗೆ ಭೇಟಿ ನೀಡುವ ಪಶುವೈದ್ಯರು, ತಾಂತ್ರಿಕ ಸಿಬ್ಬಂದಿ, ಕೆಎಂಎಫ್ ಸಿಬ್ಬಂದಿ, ಮೈತ್ರಿ ಕಾರ್ಯಕರ್ತರು, ಪಶು ಸಖಿಯರು ಹಾಗೂ ಇತರೆ ತರಬೇತಿ ಹೊಂದಿದ ಸಿಬ್ಬಂದಿಗಳಿಗೆ ರೈತರು ಅಗತ್ಯ ಸಹಕಾರ ನೀಡಬೇಕು ಎಂದರು.
ಎಂಟನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಗೆ 2,00,518 ಜಾನುವಾರುಗಳ ಗುರಿ ನಿಗದಿಪಡಿಸಿದ್ದು, ಇವುಗಳಲ್ಲಿ ಒಟ್ಟು 1,92,434 ಜಾನುವಾರುಗಳಿಗೆ ಲಸಿಕೆ ಹಾಕಿಸಿ ಶೇ.96ರಷ್ಟು ಪ್ರಗತಿ ಸಾಧಿಸ ಲಾಗಿದೆ. ಇದೀಗ ಒಂಭತ್ತನೇ ಸುತ್ತಿಗೆ 1,96,905 ಜಾನುವಾರು ಗುರಿ ನಿಗದಿಯಾಗಿದ್ದು, ಈವರೆಗೆ 68,840 ಜಾನುವಾರುಗಳಿಗೆ ಲಸಿಕೆ ಹಾಕುವು ದರೊಂದಿಗೆ ಈಗಾಗಲೇ ಶೇ.34.96ರಷ್ಟು ಗುರಿ ಸಾಧಿಸಲಾಗಿದೆ. ಲಸಿಕಾ ಕಾರ್ಯವು ಪ್ರತಿಶತಃ ನೂರರಷ್ಟು ಪ್ರಗತಿಯಾಗುವುದರೊಂದಿಗೆ ಯಾವುದೇ ಜಾನುವಾರುಗಳು ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಲಸಿಕಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 2,16,643 ಡೋಸ್ ಲಸಿಕೆಗಳು ಲಭ್ಯವಿದೆ. ಲಸಿಕಾ ಕಾರ್ಯದ ಸಂದರ್ಭ ದಲ್ಲಿ ಉತ್ಪತ್ತಿಯಾಗುವ ಜೀವವೈದ್ಯ ತ್ಯಾಜ್ಯಗಳನ್ನು ನಿಯಮಾನುಸಾರ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದ ಅವರು, ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳ ಜಾನುವಾರು ಗಳಿಗೂ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 8 ಪಶು ಸಂಜೀವಿನಿ ಆಂಬುಲೆನ್ಸ್ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ ವಾಹನಗಳ ಮೂಲಕ 2025ರ ಎಪ್ರಿಲ್‌ನಿಂದ 2026 ರ ಮಾರ್ಚ್‌ವರೆಗೆ ಒಟ್ಟು 10,043 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪಶುವೈದ್ಯಕೀಯ ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ. ಬಾಬಣ್ಣ, ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.






