ಕಪ್ಪೆಕೆರೆ ಸುಬ್ರಾಯ ಭಾಗವತ ನಿಧನ

ಉಡುಪಿ, ಮೇ 13: ಲಯಬ್ರಹ್ಮರೆಂದೇ ಖ್ಯಾತರಾಗಿದ್ದ ಬಡಗುತಿಟ್ಟಿನ ಅಗ್ರಮಾನ್ಯ ಸಾಂಪ್ರದಾಯಿಕ ಭಾಗವತ ಕಪ್ಪೆಕೆರೆ ಸುಬ್ರಾಯ ಈಶ್ವರ ಹೆಗಡೆ (79) ಇಂದು ನಿಧನರಾದರು. ಕಳೆದ ಕೆಲವು ತಿಂಗಳಿನಿಂದ ಅಸೌಖ್ಯದಲ್ಲಿದ್ದ ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಸತ್ಯ ನಾರಾಯಣ, ಪ್ರಭಾಕರ ಭಂಡಾರಿಯಂಥ ಯಕ್ಷಗಾನದ ಶ್ರೇಷ್ಠ ಕಲಾವಿದರ ರಂಗದ ಒಡನಾಡಿ ಯಾಗಿದ್ದ ಸುಬ್ರಾಯ ಭಾಗವತರು, ಮರವಂತೆ ನರಸಿಂಹದಾಸ, ಎಂ. ನಾರ್ಣಪ್ಪ ಉಪ್ಪೂರ ಇವರಿಂದಲೂ ಪ್ರೇರಣೆ ಪಡೆದಿದ್ದರು.
ಗುಂಡಬಾಳ, ಇಡಗುಂಜಿ, ಅಮೃತೇಶ್ವರೀ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ ಮೇಳಗಳಲ್ಲಿ ಐದು ದಶಕಗಳ ಕಾಲ ಕಲಾಸೇವೆ ಮಾಡಿದ್ದರು. ಉತ್ತರ ಕನ್ನಡದ ಹೊನ್ನಾವರದ ಹೊಸಾಕುಳಿಯಲ್ಲಿ ತಾಳಮದ್ದಲೆ ಗಾಗಿಯೇ ಸ್ಥಾಪನೆಗೊಂಡ ಕಲಾವರ್ಧಕ ಸಂಘದಲ್ಲಿ ನಾಲ್ಕು ದಶಕಗಳಿಂದ ಅವರು ಭಾಗವತರಾಗಿದ್ದರು.
ಅದ್ಭುತ ತಾಳ, ಲಯ, ಸಿದ್ಧಿಯನ್ನು ಹೊಂದಿದ್ದ ಸುಬ್ರಾಯ ಭಾಗವತರು, ಯಕ್ಷಗಾನದ ಮುಮ್ಮೇಳದ ಕಲಾವಿದರಿಗೆ ಅತ್ಯಂತ ಪ್ರಿಯ ಭಾಗವತರಾಗಿ ದ್ದರು. ಅಪಾರ ಪೌರಾಣಿಕ ಜ್ಞಾನ, ಪ್ರಸಂಗ ನಡೆಯ ಪರಿಣತಿ ಇವರಿಗಿತ್ತು. ಯಕ್ಷ ಗಾನ ಗುರುವಾಗಿಯೂ ಹಲವು ಕಡೆ ತರಗತಿಗಳನ್ನು ನಡೆಸಿ ಶಿಷ್ಯರನ್ನು ಸಿದ್ಧಗೊಳಿಸಿದ್ದರು. ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ, ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ ಯಕ್ಷಮಂಗಲ ಪ್ರಶಸ್ತಿ ನೀಡಿ ಗೌರವಿಸಿತ್ತು.
ಯಕ್ಷಗಾನ ಕಲಾರಂಗ ಉಪ್ಪೂರು ನಾರ್ಣಪ್ಪರ ನೆನಪಿನ ಪ್ರಶಸ್ತಿಯೊಂದಿಗೆ ಇವರನ್ನು ಸಮ್ಮಾನಿಸಿತ್ತು. ಕಳೆದ ವರ್ಷ ಯಕ್ಷಗಾನ ಕಲಾರಂಗದ ಸುವರ್ಣ ಪುರಸ್ಕಾರಕ್ಕೆ ಸುಬ್ರಾಯ ಭಾಗವತರು ಪಾತ್ರರಾಗಿದ್ದರು. ಅವರ ನಿಧನಕ್ಕೆ ಯಕ್ಷ ಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.






