ಡಾ.ಅಭಯಕುಮಾರ್, ಕೆ.ಶೇಖರ ಪೂಜಾರಿಗೆ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ

ಉಡುಪಿ, ಮೇ 13: ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ಸಂಶೋಧಕ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಅಭಯಕುಮಾರ್ ಹಾಗೂ ಚಿತ್ರಕಲಾ ಶಿಕ್ಷಕ ಕಲ್ಮಾಡಿ ಶೇಖರ ಪೂಜಾರಿ ಅವರನ್ನು ಯುವ ವಾಹಿನಿ ಉಡುಪಿ ಘಟಕ ನೀಡುವ ಈ ಬಾರಿಯ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಭಾಸ್ಕರ ಸುವರ್ಣ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ.ಕೆ.ಅಭಯ ಕುಮಾರ್ ಅವರನ್ನು ಜಾನಪದ ವಿದ್ವಾಂಸ ಪ್ರಶಸ್ತಿಗೆ ಹಾಗೂ ಕಲ್ಮಾಡಿ ಶೇಖರ ಪೂಜಾರಿ ಅವರನ್ನು ಜಾನಪದ ಕಲಾವಿದ ಪ್ರಶಸ್ತಿಗೆ ಆಯ್ಕೆ ಮಾಡ ಲಾಗಿದೆ. ಪ್ರಶಸ್ತಿಯು ತಲಾ 12,000ರೂ. ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದವರು ಹೇಳಿದರು.
ಡಾ.ಅಭಯಕುಮಾರ್ ಅವರು ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧಕ ರಾಗಿ, ಜಾನಪದ ವಿದ್ವಾಂಸರಾಗಿ ವಿಶೇಷ ಸಾಧನೆ ಮಾಡಿದ್ದಾರೆ. ಹಿರಿಯ ಜಾನಪದ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಅವರ ಮಾರ್ಗದರ್ಶನ ದಲ್ಲಿ ಮುಗೇರರ ಕುಣಿತಗಳು ಹಾಗೂ ಆಚರಣೆಗಳು ಎಂಬ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕಾಮನ್‌ವೆಲ್ತ್ ಫೆಲೋಶಿಪ್ ಪಡೆದ ವಿರಳಾತಿವಿರಳ ಸಂಶೋಧಕರಲ್ಲಿ ಒಬ್ಬರು.
ಜನಪದ ಕಲಾವಿದ ಪ್ರಶಸ್ತಿ ಪಡೆದ ಚಿತ್ರಕಲಾ ಶಿಕ್ಷಕ ಶೇಖರ ಪೂಜಾರಿ, ಚಿತ್ರಕಲಾ ಪದವಿ ಪಡೆದು ಅಲೆವೂರು ನೆಹರು ಹೈಸ್ಕೂಲ್‌ನಲ್ಲಿ ಕಲಾಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ್ ಸ್ಕೌಟ್ ಹಾಗೂ ಗೈಡ್ಸ್ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ 45 ವರ್ಷಗಳ ಸೇವೆಗಾಗಿ ರಾಜ್ಯಪಾಲರಿಂದ ಪ್ರಶಸ್ತಿ ಪಡೆದಿದ್ದಾರೆ.
ಅಳಿವಿಂಚಿನಲ್ಲಿರುವ ತುಳಸಿ ಜನಪದ ನೃತ್ಯ (ಹೌಂದರಾಯನ ಓಲಗ)ವನ್ನು 50 ವರ್ಷಗಳಿಂದ ಯುವಕರ ತಂಡ ರಚಿಸಿ ಅದರ ಕೀರ್ಥನಕಾರರಾಗಿ ನಿರ್ವಹಿಸಿಕೊಂಡು ಬರುತಿದ್ದಾರೆ. ಇವರ ಕಲಾಕುಂಚದಲ್ಲಿ ಮೂಡಿಬಂದ ತೈಲ ವರ್ಣ ಚಿತ್ರಗಳು ಅನೇಕ ಗರೋಡಿ, ಮಂದಿರ, ದೈವಸ್ಥಾನಗಳಲ್ಲಿ ಸ್ಥಾನವನ್ನು ಪಡೆದಿವೆ. ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸ್ಥಾಪಕ ವಿಶ್ವಸ್ಥರಲ್ಲಿ ಇವರು ಒಬ್ಬರಾಗಿದ್ದಾರೆ.
ಖ್ಯಾತ ಸಾಹಿತಿ, ಚಿಂತಕರಾದ ಮುದ್ದು ಮೂಡುಬೆಳ್ಳೆ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಈ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದ ಭಾಸ್ಕರ ಸುವರ್ಣ, ಮೇ 17ರಂದು ಬೆಳಗ್ಗೆ 10:30ಕ್ಕೆ ಚಿಟ್ಪಾಡಿಯ ಲಕ್ಷ್ಮೀ ಸಭಾಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಬ್ಬರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.
ಹಿರಿಯ ಸಾಹಿತಿ ಅಂಶುಮಾಲಿ ಮಣಿಪಾಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಾದ್ಯಾಪಕ ಹಾಗೂ ತುಳು ವಿದ್ವಾಂಸ ಡಾ.ದುಗ್ಗಪ್ಪ ಕಡೆಕಾರ್ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಯುವ ವಾಹಿನಿಯ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕಕುಮಾರ್ ಪಡ್ಪು ಹಾಗೂ ಉಡುಪಿ ವಿಬಿಸಿಎಲ್‌ನ ಪ್ರಾಂಶುಪಾಲರಾದ ಡಾ.ಸುರೇಖಾ ಮುಖ್ಯ ಅತಿಥಿಗಳಾಗಿರುವರು. ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ್ ಮಂಚಿ, ಕಾರ್ಯದರ್ಶಿ ವೀಕ್ಷಿತ್ ಕುಮಾರ್, ಮಾಜಿ ಅಧ್ಯಕ್ಷರಾದ ರಘುನಾಥ ಮಾಬೆನ್, ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.






