ಸಣ್ಣ ನೀರಾವರಿ ಇಲಾಖೆಯ ಹಿನ್ನಡೆಗೆ ಬಿಜೆಪಿ ಸರಕಾರದ ನಡೆಯೇ ಕಾರಣ: ಸಚಿವ ಭೋಸರಾಜು ಆರೋಪ

ಬೆಣ್ಣೆಕುದ್ರು (ಬ್ರಹ್ಮಾವರ), ಮೇ 13: ಬಜೆಟ್‌ನಲ್ಲಿ ಯಾವುದೇ ಹಣವನ್ನು ಮೀಸಲಿಡದೇ, ಸಾವಿರಾರು ಕೋಟಿ ರೂ.ಗಳ ಸಣ್ಣ ನೀರಾವರಿ ಇಲಾಖೆಯ ಯೋಜನೆಗಳಿಗೆ ಮಂಜೂರಾತಿ ನೀಡಿದ ಕಾರಣದಿಂದ ನಮ್ಮ ಈಗಿನ ಸರಕಾರ ಇಲಾಖೆಯಲ್ಲಿ ಬಾಕಿ ಉಳಿದಿರುವ ಸಾಲವನ್ನು ಮರುಪಾವತಿಸಲು ಪರದಾಟ ನಡೆಸುವಂತಾಗಿದೆ ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎಸ್.ಭೋಸುರಾಜ್ ಆರೋಪಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ಬಾರಕೂರು ಸಮೀಪದ ಬೆಣ್ಣೆಕುದ್ರುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಸಹಿತ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟಿನ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು.
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಳ್ಳುವ ಹಿಂದಿನ ದಿನ, ಅಂದಿನ ಬಿಜೆಪಿ ಸರಕಾರ ತನ್ನ ಆಡಳಿತದ ಕೊನೆಯ ದಿನವಾದ 2023ರ ಮಾರ್ಚ್ 20ರಂದು 12,696 ಕೋಟಿ ರೂ. ಮೌಲ್ಯದ ಸಣ್ಣ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿತ್ತು ಎಂದವರು ಮಾಹಿತಿ ನೀಡಿದರು.
ಸಣ್ಣ ನೀರಾವರಿ ಇಲಾಖೆಗೆ ಸಾಮಾನ್ಯವಾಗಿ ರಾಜ್ಯ ಬಜೆಟ್‌ನಲ್ಲಿ 2,000 ಕೋಟಿ ರೂ.ಗಳಿಂದ 3,000 ಕೋಟಿ ರೂ.ಗಳನ್ನು ನೀಡಲಾಗುತ್ತದೆ. ಆದರೆ 12,696 ಕೋಟಿ ರೂ.ಗಳ ಮೌಲ್ಯದ ಯೋಜನೆಗಳಿಗೆ ಮಂಜೂರಾತಿ ನೀಡಿರುವುದು ನಮಗೆ ತಲೆನೋವಾಗಿ ಪರಿಣಮಿಸಿದೆ. ನಾವೀಗ ಬಾಕಿ ಬಿಲ್‌ಗಳ ಪಾವತಿ ಹಾಗೂ ಹೊಸ ಯೋಜನೆಗಳಿಗೆ ಹಣಕಾಸು ನೀಡುವಲ್ಲಿ ಸಮತೋಲನಕ್ಕೆ ಪರದಾಡುವಂತಾಗಿದೆ ಎಂದವರು ಹೇಳಿದರು.
ಕಾಂಗ್ರೆಸ್ ಸರಕಾರ ಹೆಚ್ಚುವರಿಯಾಗಿ ಸುಮಾರು 3000 ಕೋಟಿ ರೂ.ಗಳನ್ನು ಎಡಿಬಿ, ವಿಶ್ವ ಬ್ಯಾಂಕ್ ಹಾಗೂ ನಬಾರ್ಡ್‌ಗಳಂಥ ಆರ್ಥಿಕ ಸಂಸ್ಥೆಗಳಿಂದ ಪಡೆದು ರಾಜ್ಯಾದ್ಯಂತ ಸಣ್ಣ ನೀರಾವರಿ ಇಲಾಖೆಯ ಯೋಜನೆಗಳಿಗೆ ನೀಡುವ ಪ್ರಯತ್ನ ಮಾಡುತಿದ್ದೇವೆ ಎಂದರು.
ರಾಜ್ಯದ ಪಶ್ಚಿಮ ವಾಹಿನಿ ಯೋಜನೆ ಹಾಗೂ ಸಮುದ್ರಕ್ಕೆ ತಡೆಗೋಡೆ ನಿರ್ಮಿಸುವ ಕೆಲಸಗಳ ಕುರಿತಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಭೋಸುರಾಜು, ಹಿಂದಿನ ಸರಕಾರ ಪ್ರಾರಂಭಿಸಿದ ಕೆಲವು ಯೋಜನೆಗಳು ಜನರಿಗೆ ಉಪಯುಕ್ತವಾಗಿದ್ದವು. ಕಾರವಾರದಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಿಸಿದ ಉಪ್ಪುನೀರು ತಡೆ ಯೋಜನೆಯ ಕೆಲವು ಪ್ರಾಜೆಕ್ಟ್‌ಗಳಿಂದ ನಿಜವಾಗಿಯೂ ಜನರಿಗೆ ಒಳ್ಳೆಯದಾಗಿತ್ತು. ಆದರೆ ಇನ್ನು ಕೆಲವು ಯೋಜನೆಗಳನ್ನು ಸರಿಯಾದ ಯಾವುದೇ ಸೂಕ್ಷ್ಮ ಪರಿಶೀಲನೆ ನಡೆಸದೇ ಕೆಲವು ವ್ಯಕ್ತಿಗಳಿಗೆ ವೈಯಕ್ತಿಕ ಪ್ರಯೋಜನಕ್ಕಾಗಿ ಮಾಡಲಾಗಿತ್ತು ಎಂದವರು ಆರೋಪಿಸಿದರು.
‘ನಾವು ಸಾರ್ವಜನಿಕ ಹಣವನ್ನು ವೈಯಕ್ತಿಕ ಹಿತಾಸಕ್ತಿಗಳಿಗೆ ಬಳಸುವುದಕ್ಕೆ ವಿರೋಧವಾಗಿದ್ದೇವೆ. ಕೆಲವು ಕಡೆ ಗಳಲ್ಲಿ ಖಾಸಗಿ ಮನೆಯ ಬಳಿ ತಡೆಗೋಡೆ ನಿರ್ಮಿಸಲು ಒಂದರಿಂದ ಮೂರು ಕೋಟಿ ರೂ. ಹಣವನ್ನು ಬಳಸಿರು ವುದು ಕಂಡುಬಂದಿದೆ. ಯಾವುದೇ ಸರಕಾರ ಇಷ್ಟೊಂದು ದೊಡ್ಡ ಮೊತ್ತವನ್ನು ವ್ಯಕ್ತಿಯೊಬ್ಬನ ಆಸ್ತಿ ರಕ್ಷಣೆಗೆ ಖರ್ಚು ಮಾಡುವುದು ಖಂಡಿತ ಸಲ್ಲದು ಎಂದು ಭೋಸರಾಜು ನುಡಿದರು.
ಆದ್ದರಿಂದ ತೆರೆದ ಬಾವಿ, ತಡೆಗೋಡೆ ಹಾಗೂ ಉಪ್ಪುನೀರಿನ ತಡೆ ಯೋಜನೆಗೆ ಅನುಮೋದನೆ ನೀಡುವ ಮೊದಲು ಕಟ್ಟುನಿಟ್ಟಾದ ಪರಿಶೀಲನೆ ನಡೆಸುವಂತೆ ತಾನು ಆದೇಶ ನೀಡಿರುವುದಾಗಿ ಹೇಳಿದ ಅವರು, ಸಾರ್ವಜನಿಕರಿಗೆ ಅನುಕೂಲಕವಾದ ನಿಜವಾದ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕೆ ತಾನು ಯಾವತ್ತೂ ಬದ್ಧನಿರುವುದಾಗಿ ತಿಳಿಸಿದರು.
ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕೊರೆತ ಹಾಗೂ ಉಪ್ಪು ನೀರಿನ ಹಾವಳಿ ವಿಶೇಷವಾಗಿದ್ದು, ಇಲ್ಲಿ ಯೋಜನೆಗೆ ಮಂಜೂರಾತಿ ನೀಡುವಾಗ ಸರಿಯಾದ ಪರಿಶೀಲನೆ ನಡೆಸಲೇ ಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.
ಪಶ್ಚಿಮವಾಹಿನಿ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯೋಜನೆಗೆ ತಡೆ ಹಾಕಿಲ್ಲ. ಜನೋಪ ಯೋಗಿ ಯೋಜನೆಗಳನ್ನು ಈಗಲೂ ಅನುಷ್ಠಾನಗೊಳಿಸಲು ನಾವು ಬದ್ಧರಿದ್ದೇವೆ. ಆದರೆ ಅದರ ದುರುಪಯೋಗ ವಾಗದಂತೆ ಎಚ್ಚರ ವಹಿಸುವುದಕ್ಕೆ ಆದ್ಯತೆ ನೀಡುತಿದ್ದೇವೆ. ಇದು ಪಶ್ಚಿಮ ವಾಹಿನಿಗೆ ಹಿನ್ನಡೆಯಲ್ಲ. ಈ ಯೋಜನೆ ಯಡಿ ನಿಜವಾಗಿಯೂ ಕೆಲವು ಒಳ್ಳೆಯ ಯೋಜನೆಗಳು ಅನುಷ್ಠಾನಗೊಂಡಿವೆ. ಆದರೆ ನಾವು ಅದನ್ನು ವೈಯಕ್ತಿಕ ಉಪಯೋಗಕ್ಕೆ ಬಳಸುವುದಕ್ಕೆ ತಡೆಹಾಕಿದ್ದೇವೆ. ಇದು ಸಾರ್ವಜನಿಕರಿಗಿರುವ ಯೋಜನೆ, ಅವರಿಗಾಗಿ ಬಜೆಟ್‌ನಲ್ಲಿ ವಿಶೇಷ ಪ್ರಸ್ತಾಪದ ಮೂಲಕವೂ ನಾವು ಮಂಜೂರಾತಿ ನೀಡುತ್ತೇವೆ ಎಂದರು.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನಾ (ಪಿಎಂಕಎಎಸ್‌ವೈ)ಯಡಿ 3,200ಕೋಟಿ ರೂ.ಗಳ ರಾಜ್ಯ ಸರಕಾರದ ಪ್ರಸ್ತಾಪವನ್ನು ನಾವು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದೇವೆ. ಇದರಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೀರಾವರಿ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಸಹಾಯವನ್ನು ಕೋರಿದ್ದೇವೆ. ಆದರೆ ಈ ಪ್ರಸ್ತಾಪಕ್ಕೆ ಯಾವುದೇ ಪ್ರತಿಕ್ರಿಯೆ ಕೇಂದ್ರ ಸರಕಾರದಿಂದ ಬಂದಿಲ್ಲ. ಈ ನಿಟ್ಟಿನಲ್ಲಿ ನಾವು ಕೇಂದ್ರ ಸಚಿವರಾದ ವಿ.ಸೋಮಣ್ಣ ಹಾಗೂ ಸಿ.ಆರ್.ಪಾಟೀಲರನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಕಾಂಗ್ರೆಸ್ ನಾಯಕರಾದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಉದಯಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






