ಜೂನ್ ಒಳಗೆ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಮುಗಿಸಲು ಗಡುವು: ಅದಾನಿ ಸಮೂಹ ಸಂಸ್ಥೆಗೆ ಸಂಸದರ ಸೂಚನೆ

ಉಡುಪಿ: ಜಿಲ್ಲೆಯ ಮನೆ ಮನೆಗೆ ಪೈಪ್‌ಲೈನ್ ಮೂಲಕ ಪಿಎನ್‌ಜಿ ಅನಿಲ ಸಂಪರ್ಕ ನೀಡುವ ಕಾಮಗಾರಿಯನ್ನು ಕಳೆದ 10 ವರ್ಷಗಳಿಂದ ಕೈಗೊಳ್ಳಲಾಗುತ್ತಿದೆ. ಆದರೆ ಇದುವರೆಗೂ ಕಾಮಗಾರಿ ಪೂರ್ಣ ಗೊಂಡಿಲ್ಲ. ಮುಂದಿನ ಜೂನ್ ತಿಂಗಳ ಒಳಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸುವ ಜೊತೆಗೆ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಲು ಮುಂದಾಗಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಹಾಗೂ ಮೋಟಾರು ವಾಹನಗಳಿಗೆ ಸಿಎನ್‌ಜಿ ಅನಿಲ ವಿತರಣೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮನೆ ಮನೆಗೆ ಪೈಪ್‌ಲೈನ್ ಮೂಲಕ ಪಿಎನ್‌ಜಿ ಅನಿಲ ಸಂಪರ್ಕ ಪಡೆಯಲು ಆಸಕ್ತರಿರುವ ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕುರಿತ ಮಾಹಿತಿಯನ್ನು ಬ್ಯಾನರ್, ಕರಪತ್ರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರ ಪಡಿಸುವಂತೆ ಅವರು ಅನಿಲ ಕಂಪೆನಿ ಪ್ರತಿನಿಧಿಗಳಿಗೆ ಸೂಚಿಸಿದರು.
ಜಿಲ್ಲೆಯ ನಗರಸಭಾ ವ್ಯಾಪ್ತಿಯಲ್ಲಿ ಅಂದಾಜು 35,000 ಮನೆಗಳಿಗೆ ಅನಿಲ ಸರಬರಾಜು ಆಗಬೇಕಾಗಿದ್ದು ಪ್ರಸ್ತುತ 1500 ಮನೆಗಳಿಗೆ ಪೈಪ್ ಲೈನ್ ಸಿದ್ದವಾಗಿರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪೈಪ್‌ಲೈನ್ ಕಾಮಗಾರಿಯನ್ನು ಶೀಘ್ರವೇ ಮುಕ್ತಾಯಗೊಳಿಸುವ ಮೂಲಕ ಉಡುಪಿ ನಗರದ ಸಾರ್ವಜನಿಕರಿಗೆ ಗ್ಯಾಸ್ ಸಂಪರ್ಕ ಒದಗಿಸಬೇಕು ಎಂದು ಸಂಸದ ಕೋಟ ಸೂಚಿಸಿದರು.
ಜಿಲ್ಲೆಯ ರಿಕ್ಷಾ ಚಾಲಕರು ತಮ್ಮ ಆಟೋಗಳಿಗೆ ಸಿಎನ್‌ಜಿ ಅನಿಲ ಹಾಕಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿ ರುವುದು ಕಂಡು ಬರುತ್ತಿದೆ. ಜಿಲ್ಲೆಗೆ ಹೆಚ್ಚುವರಿಯಾಗಿ ಸಿಎನ್‌ಜಿ ಗ್ಯಾಸ್ ಸಾಗಾಣಿಕೆ ಮಾಡಲು 4 ಜಂಬೋ ವಾಹನ ವನ್ನು ಒದಗಿಸಿದ್ದಲ್ಲಿ ಸಮಸ್ಯೆ ನಿವಾರಣೆಯಾಗಲಿದೆ. ಈ ಬಗ್ಗೆ ಕ್ರಮವಹಿಸುವಂತೆ ಅವರು ಅನಿಲ ಕಂಪೆನಿಗೆ ತಿಳಿಸಿದರು.
ಪಣಂಬೂರಿನ ಎಟಿಜಿಎಲ್ ಟರ್ಮಿನಲ್‌ವರೆಗೆ ಪೈಪ್‌ಲೈನ್ ಅಳವಡಿಸುವ ಕಾರ್ಯ ಈ ತಿಂಗಳ ಕೊನೆಯ ವೇಳೆಗೆ ಪೂರ್ಣಗೊಳ್ಳಲಿದ್ದು ನಂತರ, ಲೈನ್ ಚಾರ್ಜ್ ಮಾಡಲು ಅನುಮೋದನೆಗಾಗಿ ಪೆಸ್ಸೋಗೆ ಅರ್ಜಿಯನ್ನು ಸಲ್ಲಿಸಲಾ ಗುತ್ತದೆ. ಪೆಸ್ಸೋ ಅನುಮತಿ ಪಡೆದ ನಂತರ, ಎಟಿಜಿಎಲ್ ಸಿದ್ಧತೆಗೆ ಒಳಪಟ್ಟು ಅನಿಲದ ಪೂರೈಕೆಯನ್ನು ಪ್ರಾರಂಭಿ ಸಬಹುದು ಎಂದು ಗೇಲ್ ಸಂಸ್ಥೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 11 ಸಿಎನ್‌ಜಿ ವಿತರಣಾ ಘಟಕವಿದ್ದು ಹೊಸದಾಗಿ ಮುನಿಯಾಲು, ಎರ್ಮಾಳು ಪ್ರದೇಶದಲ್ಲಿ ಹೊಸ ಸಿಎನ್‌ಜಿ ವಿತರಣಾ ಘಟಕ ಮಂಜೂರು ಮಾಡಲು ಪತ್ರ ಬರೆದಿರುವುದಾಗಿ ಸಂಸದರು ತಿಳಿಸಿದರು.
ಪ್ರಸ್ತುತ ಸಮಾರಂಭಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ಅನುಗುಣ ವಾಗಿ ಸಿಎನ್‌ಜಿ ಗ್ಯಾಸ್ ಪೂರೈಕೆಗೆ ಈಗಿರುವ 17 ಟ್ರಕ್‌ಗಿಂತ ಹೆಚ್ಚು ವಾಹನ ನೀಡಬೇಕೆಂದು ಸಿಎನ್‌ಜಿ ಗ್ಯಾಸ್ ವಿತರಕರು ಸಭೆಯ ಗಮನಕ್ಕೆ ತಂದರು, ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಅದಾನಿ ಮತ್ತು ಗೇಲ್ ಕಂಪೆನಿಯವರು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುವಂತೆ, ಜಿಲ್ಲೆಗೆ 10 ಹೆಚ್ಚುವರಿ ಲೋಡ್‌ಗಳ ಸಿಎನ್‌ಜಿ ಒದಗಿಸಲು ಕ್ರಮ ವಹಿಸುವಂತೆ ಹಾಗೂ ಇಂಧನವನ್ನು ಲೋಡ್ ಮಾಡುವಾಗ ನಿಯಮ ಪಾಲಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಅನಿಲ ಘಟಕದಲ್ಲಿ ಏನಾದರೂ ಸಮಸ್ಯೆ ಉದ್ಭವಿಸಿದಾಗ ಪರಿಹರಿಸಲು ತಂತ್ರಜ್ಞರ ಕೊರತೆಯಿದ್ದು, ಹೆಚ್ಚುವರಿಯಾಗಿ ಸಿಎನ್‌ಜಿ ಆಪರೇಟರ್‌ಗಳನ್ನು ನೇಮಕ ಗೊಳಿಸುವಂತೆ ಅನಿಲ ಕಂಪೆನಿಗಳ ಪ್ರತಿನಿಧಿಗಳಿಗೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ರವೀಂದ್ರ, ಅದಾನಿ ಹಾಗೂ ಗೇಲ್ ಕಂಪೆನಿಗಳ ಅಧಿಕಾರಿಗಳು ಸಿಎನ್‌ಜಿ ವಿತರಣಾ ಬಂಕ್‌ಗಳ ಮಾಲಕರು ಉಪಸ್ಥಿತರಿದ್ದರು.






