ಗಾಳಿ-ಮಳೆ: ಬೈಂದೂರು, ಕಾರ್ಕಳಗಳಲ್ಲಿ ಮನೆಗಳಿಗೆ ಹಾನಿ

ಉಡುಪಿ, ಮೇ 15: ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯ ಸಂದರ್ಭದಲ್ಲಿ ಬೀಸುವ ಗಾಳಿ, ಸಿಡಿಲು-ಗುಡುಗಿಗೆ ಹಾನಿಯು ಮುಂದುವರಿದಿದ್ದು, ಗುರುವಾರ ಸಂಜೆಯ ಮಳೆಗೆ ಜಿಲ್ಲೆಯ 10ಕ್ಕೂ ಅಧಿಕ ಮನೆ ಹಾನಿಗೊಳಗಾಗಿದ್ದು, ಸುಮಾರು ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.
ಬೈಂದೂರು ತಾಲೂಕಿನ ನಾವುಂದ ಗ್ರಾಮದ ಶೇಷು ಆಚಾರ್ಯ ಎಂಬವರ ಮನೆಯ ಜಾನುವಾರು ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಅದೇ ಗ್ರಾಮದ ರಿಯಾಝ್ ಅವರ ಮನೆಯ ಮೇಲೆ ಮರ ಬಿದ್ದು 25 ಸಾವಿರ, ಸುಬ್ಬ ಖಾರ್ವಿ ಅವರ ಮನೆಗೆ 60 ಸಾವಿರ, ಕೃಷ್ಣ ಗಾಣಿಗರ ಮನೆ ಮೇಲೆ ಮರ ಬಿದ್ದು 50ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕಿನ ರೆಂಜಾಳದ ಸುನಂದ ಎಂಬವರ ವಾಸದ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಳಗಾಗಿದ್ದು 25,000ರೂ., ನೂರಾಲ್‌ಬೆಟ್ಟು ಗೋಪಾಲ ಮೇರ ಅವರ ವಾಸದ ಮನೆಗೆ 80 ಸಾವಿರ ಹಾಗೂ ಮೋಂತಿ ರೆಜಿನಾ ಅವರ ಮನೆಗೆ 45 ಸಾವಿರ ರೂ.ಗಳಷ್ಟು ನಷ್ಟವಾಗಿರುವ ಬಗ್ಗೆ ವರದಿಗಳು ಬಂದಿವೆ.
ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಚಣಿಲ ಎಂಬವರ ವಾಸದ ಮನೆಗೆ ಮಳೆಯಿಂದ ಭಾಗಶ: ಹಾನಿಯಾ ಗಿದ್ದು, ಕಾಪು ತಾಲೂಕು ಎಲ್ಲೂರು ಗ್ರಾಮದ ಜನಾರ್ದನ ಎಂಬವರ ಮನೆಗೆ ಮರ ಬಿದ್ದು 50,000ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 11.5 ಮಿ.ಮೀ. ನಷ್ಟು ಮಳೆ ಸುರಿದಿದೆ. ಕಾಪು ವಿನಲ್ಲಿ 23.8ಮಿ.ಮೀ., ಬೈಂದೂರಿನಲ್ಲಿ 21.1ಮಿ.ಮೀ., ಕುಂದಾಪುರದಲ್ಲಿ 14.0, ಕಾರ್ಕಳದಲ್ಲಿ 12.0, ಉಡುಪಿಯಲ್ಲಿ 3.2ಮಿ.ಮೀ.ಮಳೆಯಾಗಿದೆ.






