ರಾಜ್ಯದಲ್ಲಿ ನೀಟ್ ಪರೀಕ್ಷೆ ಸಿಇಟಿ ಮೂಲಕ ನಡೆಯಲಿ: ಎನ್‌ಎಸ್‌ಯುಐ

ಉಡುಪಿ, ಮೇ 15: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭಾರೀ ಅಕ್ರಮ ಗಳಿಂದಾಗಿ ನೀಟ್-ಯುಜಿ 2026 ಪರೀಕ್ಷೆ ರದ್ದಾಗಲು ಕೇಂದ್ರ ಸರಕಾರದ ವೈಫಲ್ಯವೇ ಮುಖ್ಯ ಕಾರಣ ಎಂದು ಎನ್‌ಎಸ್‌ಯುಐನ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಸೌರಭ್ ಬಲ್ಲಾಳ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ನೇತೃತ್ಯದ ಕೇಂದ್ರ ಸರಕಾರದಡಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ನೀಟ್-ಯುಜಿ 2026 ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭಾರೀ ಅಕ್ರಮ ಗಳಿಂದಾಗಿ ರದ್ದಾಗಿದ್ದು, ಕಳೆದ 3 ವರ್ಷಗಳಲ್ಲಿ 2ನೇ ಬಾರಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಮೆಡಿಕಲ್ ಶಿಕ್ಷಣದ ಕನಸನ್ನು ಕೋಚಿಂಗ್ ಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಹರಾಜು ಹಾಕಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಯುತ, ಪಾರದರ್ಶಕ ರಾಷ್ಟ್ರೀಯ ಪರೀಕ್ಷೆ ನಡೆಸುವಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ತನ್ನ ಅಸಮರ್ಥತೆ ಯನ್ನು ಸಾಬೀತುಪಡಿಸಿದೆ. ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು 2 ವರ್ಷ ಗಳ ತಯಾರಿ ನಡೆಸಿ, ಕೋಚಿಂಗ್‌ಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಈಗ ಅನಿಶ್ಚಿತತೆ ಮತ್ತು ತೀವ್ರ ಮಾನಸಿಕ ಆಘಾತ ಎದುರಿಸುವಂತಾಗಿದೆ ಎಂದವರು ಹೇಳಿದರು.
ಎನ್‌ಟಿಎ ರದ್ದುಗೊಳಿಸಿ: ವಿದ್ಯಾರ್ಥಿಗಳ ತಪ್ಪಿಲ್ಲದೆ ಮರು-ಪರೀಕ್ಷೆ ಅನ್ಯಾಯದ ಶಿಕ್ಷೆಯಾಗಿದೆ. ಎನ್‌ಟಿಎ ಪದೇ ಪದೇ ವಿಫಲವಾಗಿ ಎಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕೋಚಿಂಗ್ ಮಾಫಿಯಾದ ಕೈಗೊಂಬೆಯಾಗಿರುವ ಎನ್‌ಟಿಎಯನ್ನು ತಕ್ಷಣ ವಿಸರ್ಜಿಸಬೇಕೆಂದು ಸೌರವ ಬಲ್ಲಾಳ್ ಆಗ್ರಹಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಕೋಚಿಂಗ್ ಮಾಫಿಯಾ- ಎನ್‌ಟಿಎ ನಂಟನ್ನು ಬಯಲಿಗೆಳೆಯಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ನ್ಯಾಯಾಂಗ ಆಯೋಗ ರಚಿಸಿ ಕಠಿಣ ಶಿಕ್ಷೆ ನೀಡಬೇಕು. ಅಲ್ಲದೇ ಮಾನಸಿಕ ಕಿರುಕುಳ, ಪ್ರಯಾಣ ಮತ್ತು ಕೋಚಿಂಗ್ ನಷ್ಟಕ್ಕೆ ಪ್ರತಿ ನೀಟ್ ಆಕಾಂಕ್ಷಿಗೆ ಕೇಂದ್ರ ಸರ್ಕಾರವು 50,000 ರೂ. ಪರಿಹಾರ ನೀಡಬೇಕು ಎಂದವರು ಆಗ್ರಹಿಸಿದರು.
ಇಡೀ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಕರ್ನಾಟಕಕ್ಕೆ ಪ್ರತ್ಯೇಕ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದ ಬಲ್ಲಾಳ್, ರಾಜ್ಯದಲ್ಲಿ ನೀಟ್ ಪರೀಕ್ಷೆಯನ್ನು ಸಿಇಟಿ ಮೂಲಕ ನಡೆಸುವಂತೆ ಆಗ್ರಹಿಸಿದರು.
ಖಾಸಗಿ ಕೋಚಿಂಗ್ ಲಾಬಿಗಳ ಲಾಭಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡು ತ್ತಿದ್ದು, ಎನ್‌ಎಸ್‌ಯುಐ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಿದೆ. ನ್ಯಾಯ ವಿಳಂಬ ವಾದರೆ ಉಡುಪಿ, ಕುಂದಾಪುರ, ಕಾರ್ಕಳ ಮತ್ತು ಬ್ರಹ್ಮಾವರದಲ್ಲಿ ಜಿಲ್ಲಾವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್, ರಾಜ್ಯ ಕಾರ್ಯದರ್ಶಿ ಅನೀಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಅಧ್ಯಾನ್ ಉಪಸ್ಥಿತರಿದ್ದರು.






