ಉಪ್ಪೂರು ಬಳಿ ಹಿಟ್ ಆ್ಯಂಡ್ ರನ್: ಅಪರಿಚಿತ ವ್ಯಕ್ತಿ ಮೃತ್ಯು

ಬ್ರಹ್ಮಾವರ, ಮೇ 16: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಪ್ಪೂರು ಗ್ರಾಮದ ಕುದ್ರುಬೆಟ್ಟುವಿನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಮೇ 15ರಂದು ರಾತ್ರಿ ವೇಳೆ ನಡೆದಿದೆ.
ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಬಿಳಿ ಬಣ್ಣದ ಕಾರು ರಸ್ತೆ ದಾಟಲು ನಿಂತಿದ್ದ ಸುಮಾರು 30ರಿಂದ 35ವರ್ಷ ಪ್ರಾಯ ವ್ಯಕ್ತಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಚಾಲಕ ಅಪಘಾತ ಪಡಿಸಿದ ಬಳಿಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮೃತರ ಗುರುತು ಅಥವಾ ಸಂಬಂಧಿಕರ ಮಾಹಿತಿ ಇರುವವರು ಬ್ರಹ್ಮಾವರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0820-2561044 ಅಥವಾ ಮೊಬೈಲ್ ಸಂಖ್ಯೆ 9480805453 ಅನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.




