ಕೊಡವೂರು ಮಹಾರುದ್ರಯಾಗ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ

ಉಡುಪಿ, ಮೇ 16: ಕೊಡವೂರು ಮಹತೋಭಾರ ಶ್ರೀಶಂಕರ ನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿರುವ ಮಹಾರುದ್ರಯಾಗ ಕಾರ್ಯ ಕ್ರಮಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಭೇಟಿ ನೀಡಿದರು.
ಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಹಾಗೂ ಸಮಿತಿ ಪದಾಧಿಕಾರಿಗಳು ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಸಚಿವರು ಶ್ರೀಶಂಕರನಾರಾಯಣ ದೇವರ ದರ್ಶನ ಪಡೆದರು. ಸಚಿವರಿಗೆ ಶಾಲು ಹೊದಿಸಿ ದೇವರ ವಿಗ್ರಹವನ್ನು ಕೊಟ್ಟು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಪಂ ಸಿಇಒ ಪ್ರತೀಕ್ ಬಾಯಲ್, ಕೊಡವೂರು ಶಂಕರನಾರಾಯಣ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಮಹಾರುದ್ರ ಯಾಗ ಸಮಿತಿಯ ಪ್ರಧಾನ ಸಂಚಾಲಕ ತಾರನಾಥ ಪೂಜಾರಿ, ಸಂಚಾಲಕರಾದ ನಂದಕಿಶೋರ್ ಕೆಮ್ಮಣ್ಣು ರಮೇಶ್ ತಿಂಗಳಾಯ ಮೊದಲಾದವರು ಉಪಸ್ಥಿತರಿದ್ದರು.
ಮೃತ್ಯುಂಜಯ ಯಾಗ: ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮ ಗಳು ಬೆಳಿಗ್ಗೆಯಿಂದ ಆರಂಭಗೊಂಡವು. ವೇದ ಮೂರ್ತಿ ಹಯವದನ ತಂತ್ರಿಗಳು ಪುತ್ತೂರು, ಮಧುಸೂದನ ತಂತ್ರಿಗಳು, ಸುಬ್ರಹ್ಮಣ್ಯ ಭಟ್, ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 8ಗಂಟೆಗೆ ಪುರೋಹಿತರಿಂದ ರುದ್ರಜಪ ಮೃತ್ಯುಂಜಯ ಯಾಗ ಆರಂಭಗೊಂಡವು.
ಬಳಿಕ ಶಂಕರನಾರಾಯಣ ದೇವರಿಗೆ ಕಲಶಾಧಿವಾಸ, ಅಧಿವಾಸ ಹೋಮ, ಪರಿವಾರ ಕಲಶ ಸಹಿತ ವಿವಿಧ ಹೋಮಹವನಗಳು ನೆರವೇರಿದವು.






