ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಮಂಗಳೂರು, ಮೇ 19: ಎಪಿಕೆ ಲಿಂಕ್ ಕಳುಹಿಸಿ ಸುಮಾರು 2,24,800 ರೂ.ವನ್ನು ತನ್ನ ಖಾತೆಗೆ ವರ್ಗಾಯಿಸಿ ಕೊಂಡು ವಂಚನೆ ಮಾಡಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2026ರ ಎ.24ರಂದು ಸ್ನೇಹಿತನ ಮೊಬೈಲ್ ಸಂಖ್ಯೆಯಿಂದ ಎಪಿಕೆ ಲಿಂಕ್ ಬಂದಿದೆ. ಅದರಲ್ಲಿ ಆರ್‌ಟಿಒ ಚಲನ್ ಎಂದು ಬರೆದಿತ್ತು. ಅದನ್ನು ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗಿತ್ತು. ಅದರಲ್ಲಿ ಜಿ-ಮೇಲ್, ಮೊಬೈಲ್ ಸಂಖ್ಯೆ ಮತ್ತು ಯುಐಡಿಎಐ ಸಂಖ್ಯೆಯನ್ನು ನಮೂದಿಸುವಂತೆ ಸೂಚಿಸಲಾಗಿತ್ತು. ಅದರಂತೆ ತಾನದನ್ನು ನಮೂದಿಸಿದೆ. ಬಳಿಕ ತನ್ನ ವಾಟ್ಸ್‌ಆ್ಯಪ್ ಕೆಲಸ ಮಾಡಿಲ್ಲ, ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಕೂಡ ಕಾರ್ಯನಿರ್ವಹಿಸದೆ ಬ್ಲಾಕ್ ಆಗಿತ್ತು. ಆ ದಿನ ಬೇರೆ ಸಿಮ್ ಖರೀದಿಸಿ ಬಳಸಲು ಆರಂಭಿಸಿದೆ. ಎ.28ರಂದು ಖಾತೆಯಿಂದ ಹಣ ಡೆಬಿಟ್ ಆದ ಬಗ್ಗೆ ಮೆಸೆಜ್ ಬರಲು ಪ್ರಾರಂಭಿಸಿದೆ. ಕೂಡಲೇ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಹಂತ ಹಂತವಾಗಿ 2,24,800 ರೂ. ವಿವಿಧ ಖಾತೆಗಳಿಗೆ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ಯಾರೋ ಅಪರಿಚಿತರು ವಂಚನೆ ಮಾಡುವ ಉದ್ದೇಶದಿಂದ ತನ್ನ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಣ ಕಳಕೊಂಡ ವ್ಯಕ್ತಿ ತಿಳಿಸಿದ್ದಾರೆ.




