ನೀಟ್ ಪ್ರಶ್ನೆಪತ್ರಿಕೆ ಮಾರಾಟ ಆಗಿರುವುದೇ ಹೊರತು ಸೋರಿಕೆಯಲ್ಲ: ಜಯಪ್ರಕಾಶ್ ಹೆಗ್ಡೆ

ಕುಂದಾಪುರ, ಮೇ 20: ನೀಟ್ ಪ್ರಶ್ನೆಪತ್ರಿಕೆ ಹಗರಣದಿಂದಾಗಿ ಇಂದು ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಬೀದಿಗೆ ಬಂದಿದ್ದಾರೆ. ಇಂದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದಲ್ಲ, ಬದಲು ಮಾರಾಟ ಆಗಿರುವುದು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಟೀಕಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ದ ಕುಂದಾಪುರದ ಎನ್‌ಎಸ್‌ಯುಐ ವತಿಯಿಂದ ಬುಧವಾರ ನಗರದ ಶಾಸ್ತ್ರೀವೃತ್ತದ ಬಳಿಕ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ನೀಟ್ ಪರೀಕ್ಷೆಯನ್ನು ಕೇಂದ್ರ ಸರಕಾರದಿಂದ ಮಾಡುವುದನ್ನು ಬಿಟ್ಟು ನೇರವಾಗಿ ರಾಜ್ಯ ಸರಕಾರದ ಸಿಇಟಿ ಮೂಲಕ ನಡೆಸಿ ರಾಜ್ಯದ ಮಕ್ಕಳಿಗೆ ಹೆಚ್ಚೆಚ್ಚು ಮೆಡಿಕಲ್ ಸೀಟ್‌ಗಳು ಸಿಗುವಂತಾಗಬೇಕು. ಈ ಹಿಂದೆ ಸಿಇಟಿ ಪರೀಕ್ಷೆ ಇದ್ದಾಗ ಎಂದಿಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲಿಲ್ಲ. ಮಾರಾಟವೂ ಆಗಿರಲಿಲ್ಲ. ಪ್ರಶ್ನೆ ಪತ್ರಿಕೆ ಮಾರಾಟದ ಆರೋಪಿಗಳ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ನೀಟ್ ಪರೀಕ್ಷೆ ಪತ್ರಿಕೆ ಪ್ರತೀ ವರ್ಷವೂ ಸೋರಿಕೆ ಯಾಗುತ್ತಿದ್ದು, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟ ವಾಡಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಿರಂತರ ಪ್ರಕ್ರಿಯೆಯಾಗಿದೆ. ಕೇಂದ್ರದ ದಲ್ಲಾಳಿಗಳೇ ಸೋರಿಕೆ ಮಾಡಿ ಶ್ರೀಮಂತರ ಮಕ್ಕಳಿಗೆ ಮಾರಾಟ ಮಾಡುವ ಮೂಲಕ ಶ್ರೀಮಂತರ ಮಕ್ಕಳನ್ನು ವೈದ್ಯರಾಗಿ ಮಾಡಲು ಹೊರಟಿರುವುದು ದುರಂತ. ಕುಂದಾಪುರದ ಬ್ಲಾಕ್ ಕಾಂಗ್ರೆಸ್ ಕಾನೂನು ಬದ್ದವಾಗಿ ಪಡೆದ ನಿವೇಶನದ ವಿರುದ್ದ ಹೋರಾಟ ಮಾಡಿದ ಕುಂದಾಪುರದ ಬಿಜೆಪಿ ಇಂದು ನೀಟ್ ಮೂಲಕ ಅದೆಷ್ಟೋ ಬಡ ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗುತ್ತಿರುವ ಬಗ್ಗೆ ಯಾಕೆ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಎನ್‌ಎಸ್‌ಐಯು ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಜಿಲ್ಲಾ ಕಾರ್ಯದರ್ಶಿ ಸುಮಂತ್ ಶೆಟ್ಟಿ ಮಾತನಾಡಿದರು. ಬಳಿಕ ಎನ್‌ಎಸ್‌ಯುಐ ಕಾರ್ಯ ಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನೋಟುಗಳ ಜೆರಾಕ್ಸ್ ಪ್ರತಿಯನ್ನು ಎಸೆದು ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲೇ ಕೂತು ಪ್ರತಿಭಟಿಸಿದರು. ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ರಾಜ್ಯ ಕಾರ್ಯ ದರ್ಶಿ ಸಯ್ಯದ್ ಪುರ್ಖಾನ್ ಯಾಸಿನ್ ಹೆಮ್ಮಾಡಿ, ತಾಲೂಕು ಅಧ್ಯಕ್ಷ ಸುಜನ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಸುದೀಶ್ ಶೆಟ್ಟಿ ಕರ್ಕಿ, ಶಮಂತ್ ಕುಂದಾಪುರ, ಅರ್ಜುನ್ ನಾಯರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಯುವ ಕಾಂಗ್ರೆಸ್ ಉಡುಪಿ ವಿಧಾನಸಭಾ ಅಧ್ಯಕ್ಷ ಸುದೇಶ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡರಾದ ಪ್ರಮೋದ್ ಪೂಜಾರಿ, ಅಭಿಜಿತ್ ಪೂಜಾರಿ, ಎನ್‌ಎಸ್ಯುಐ ಪದಾಧಿಕಾರಿಗಳಾದ ದರ್ಶನ ಶೆಟ್ಟಿ, ಧನುಷ್ ಕಾಳಾವರ, ಸುಮುಖ್, ರಂಜಿತ್ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.
‘ಕೇಂದ್ರದಲ್ಲಿ ಇದೀಗ ಬಹಳಷ್ಟು ಹಗರಣಗಳು ನಡೆಯುತ್ತಿದ್ದರೂ ಬಿಜೆಪಿಯವರು ಮಾತನಾಡುತ್ತಿಲ್ಲ. ಅಂದು ಮನಮೋಹನ್ ಸಿಂಗ್ ಮೌನ ಸಿಂಗ್ ಆಗಿರಲಿಲ್ಲ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಮೌನವಾಗಿದ್ದಾರೆ. ಕೇಂದ್ರ ಸರಕಾರದ ತಪ್ಪುಗಳನ್ನು ಚರ್ಚೆ ಮಾಡಲು ರಾಜ್ಯದ ಸಂಸದರು ಧ್ವನಿಯಾಗಿಲ್ಲ’
-ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು






