ಆನ್‌ಲೈನ್ ಔಷಧಿ ಮಾರಾಟಕ್ಕೆ ತೀವ್ರ ವಿರೋಧ: ಉಡುಪಿ ಜಿಲ್ಲೆಯಾದ್ಯಂತ ಬಹುತೇಕ ಮೆಡಿಕಲ್‌ಗಳು ಬಂದ್

ಉಡುಪಿ, ಮೇ 20: ಆನ್‌ಲೈನ್, ಆ್ಯಪ್‌ಗಳ ಮೂಲಕ ಹಾಗೂ ಭಾರೀ ರಿಯಾಯಿತಿ ದರದಲ್ಲಿ ಔಷಧಿ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ ನೀಡಿದ ಕರೆಯಂತೆ ಉಡುಪಿ ಜಿಲ್ಲೆಯಾದ್ಯಂತ ಬುಧವಾರ ನೂರಾರು ಫಾರ್ಮಸಿಗಳು ಬಂದ್ ಆಚರಿಸಿದವು.
ಈ ಬಂದ್‌ಗೆ ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಬೆಂಬಲ ಸೂಚಿಸಿದ್ದು, ಅದರಂತೆ ಮೇ19ರ ರಾತ್ರಿ 12ಗಂಟೆಯಿಂದ ಮೇ 20ರ ರಾತ್ರಿ 12 ಗಂಟೆಯವರೆಗೆ ಉಡುಪಿ ಜಿಲ್ಲಾ ಹೋಲ್‌ಸೇಲ್ ವ್ಯಾಪಾರಸ್ಥರು ಹಾಗೂ ಸರ್ಜಿಕಲ್ ವ್ಯಾಪಾರಸ್ಥರು ಸೇರಿದಂತೆ 650ಕ್ಕೂ ಅಧಿಕ ತಮ್ಮ ಸಂಸ್ಥೆಗಳನ್ನು ಬಂದ್ ಮಾಡಿದ್ದಾರೆ.
‘ಆನ್‌ಲೈನ್ ಸೇವೆಯಿಂದ ಕಾನೂನು ಬಾಹಿರ ಔಷಧ ವ್ಯವಹಾರಗಳಿಗೆ ಅವಕಾಶ ಸಿಗುತ್ತಿದೆ ಕೇವಲ ವ್ಯಾಪಾರದ ದೃಷ್ಟಿಯಿಂದ ನಾವು ಪ್ರತಿಭಟನೆ ಮಾಡುತ್ತಿಲ್ಲ. ಜನರ ಸುರಕ್ಷತೆಗಾಗಿ ಈ ಹೋರಾಟ ನಡೆಸುತ್ತಿದ್ದೇವೆ. ಅನೇಕ ಬಾರಿ ಸರಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಇಂದು ನಮ್ಮ ವ್ಯವಹಾರ ಬಿಟ್ಟು ಪ್ರತಿಭಟನೆಗೆ ಇಳಿದಿದ್ದೇವೆ’ ಎಂದು ಸಂಘದ ಜಿಲ್ಲಾಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್ ತಿಳಿಸಿದ್ದಾರೆ.
ಆದರೆ ಅಪೋಮೋ ಪಾಮರ್ಸಿ, ಮೆಡ್‌ಪ್ಲಸ್ ಮೆಡಿಕಲ್‌ಗಳು, ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು, ಜಿಲ್ಲಾಸ್ಪತ್ರೆಯ ಮೆಡಿಕಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು.
ಕುಂದಾಪುರದಲ್ಲಿ ಬಂದ್: ಎಐಒಸಿಡಿ ಕರೆಯಂತೆ ಕುಂದಾಪುರದಲ್ಲಿ ಕೂಡ ಬಹುತೇಕ ಮೆಡಿಕಲ್ ಶಾಪ್‌ಗಳು ಬಂದ್ ಮಾಡಿ ಬೆಂಬಲ ಸೂಚಿಸಿದವು.
ಬಂದ್ ಹಿನ್ನೆಲೆ ಸಾರ್ವಜನಿಕರಿಗೆ ಔಷಧಿ ಅಗಂಡಿಗಳು ಸಿಗದೇ, ತೊಂದರೆ ಅನುಭವಿಸುವಂತಾಯಿತು. ಆದರೆ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಮೆಡಿಕಲ್ ಅಂಗಡಿಗಳು ತೆರೆದಿದ್ದ ಕಾರಣ ಅಂತಹ ಸಮಸ್ಯೆಗಳಾದ ಬಗ್ಗೆ ವರದಿಯಾಗಿಲ್ಲ. ಜನೌಷಧಿ ಕೇಂದ್ರವೂ ಎಂದಿನಂತೆ ತೆರೆದಿತ್ತು.
ಮನವಿ ಸಲ್ಲಿಕೆ: ಉಡುಪಿ ಜಿಲ್ಲಾ ವ್ಯಾಪಾರಸ್ಥರ ಸಂಘದ ಸೂಚನೆಯಂತೆ ಸಂಘದ ಗೌರವಾಧ್ಯಕ್ಷ ಹಲ್ಸನಾಡ್ ಸದಾಶಿವ್ ರಾವ್ ನೇತೃತ್ವದಲ್ಲಿ ಕುಂದಾಪುರದಲ್ಲಿ ಉಪತಹಶಿಲ್ದಾರ್ ಪ್ರಕಾಶ್ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಿನಕರ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ಕರುಣಾಕರ ಹೆಗಡೆ, ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಗಿರೀಶ್ ಹಲ್ಸನಾಡ್, ಮೀನಾ ಸುರೇಶ್, ನಟರಾಜ, ನೂತನ್ ಪ್ರಸನ್ನ, ಕಪಿಲ ಕೃಷ್ಣ, ರಾಘವೇಂದ್ರ ಹೆಬ್ಬಾರ್, ಹರೀಶ, ಉದಯ ಭಂಡಾರ್ಕರ್, ಗಣೇಶ್ ಬೆಟ್ಟಿನ್, ಕಾರ್ತಿಕೇಯ ಹಲ್ಸನಾಡ್ ಉಪಸ್ಥಿತರಿದ್ದರು.






